Published On: Wed, Jul 27th, 2022

ಪ್ರವೀಣ್ ನೆಟ್ಟಾರ್ ಹತ್ಯೆ ಬಿಜೆಪಿ ಸರಕಾರದ ದುರಾಡಳಿತದ ಫಲಶ್ರುತಿ : ಮಸೂದ್, ಪ್ರವೀಣ್ ಕುಟುಂಬಗಳಿಗೆ ತಾರತಮ್ಯ ವಿಲ್ಲದೆ ಪರಿಹಾರ ಒದಗಿಸಿ : ಡಿವೈಎಫ್ಐ ಆಗ್ರಹ

ಬಂಟ್ವಾಳ: ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಗೆ ಬಿಜೆಪಿ ಸರಕಾರದ ದುರಾಡಳಿತ ಹಾಗೂ ಮತೀಯವಾದಿ ನೀತಿಗಳೇ ನೇರ ಕಾರಣ. ಬಿಜೆಪಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಪೂರ್ತಿ ಕುಸಿದಿದ್ದು, ಕೋಮುವಾದಿ ಸಂಘಟನೆಗಳು ಅಂಕೆ ಮೀರಿ ವರ್ತಿಸುತ್ತಿವೆ. ಬೆಳ್ಳಾರೆಯಲ್ಲಿ ನಡೆದಿರುವ ಮಸೂದ್ ಹಾಗೂ ಪ್ರವೀಣ್ ನೆಟ್ಟಾರ್ ಕೊಲೆಗಳು ಮತೀಯ ಸಂಘರ್ಷ ಭುಗಿಳೇಲುವ ಭೀತಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ‌ ಈಗಲಾದರು ಎಚ್ಚೆತ್ತುಕೊಂಡು ತಮ್ಮ ಪರಿವಾರವೂ ಸೇರಿದಂತೆ ಕೋಮುವಾದಿ ಸಂಘಟನೆಗಳಿಗೆ ಕಡಿವಾಣ ಹಾಕಬೇಕು. ಹಿಂದು ಮುಸ್ಲಿಮರ ಮಧ್ಯೆ ತಾರತಮ್ಯ ಎಸಗದೆ ಕೊಲೆಗೀಡಾದ ಮಸೂದ್ ಹಾಗೂ ಪ್ರವೀಣ್ ಇಬ್ಬರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಬೇಕು ಹಾಗೂ ಸಮಾನವಾಗಿ ಪರಿಹಾರ ಘೋಷಿಸಬೇಕು ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಚುನಾವಣೆ ಹತ್ತಿರ ಬರುವಾಗ ಕರಾವಳಿ ಜಿಲ್ಲೆಗಳಲ್ಲಿ ಧರ್ಮಾಧಾರಿತ ಕೊಲೆಗಳು ನಡೆಯುತ್ತವೆ ಎಂಬ ಜನ ಸಾಮಾನ್ಯರ ಆತಂಕ ಮತ್ತೊಮ್ಮೆ ನಿಜವಾಗಿದೆ. ಬೆಳ್ಳಾರೆಯಲ್ಲಿ ವಾರದ ಅಂತರದಲ್ಲಿ ನಡೆದಿರುವ ಎರಡು ಕೊಲೆಗಳು ನಾಗರಿಕ ಸಮಾಜ ತತ್ತರಿಸುವಂತೆ ಮಾಡಿದೆ. ಬೆಳ್ಳಾರೆಯ ಹದಿಹರೆಯದ ಮುಸ್ಲಿಂ ಯುವಕ ಮಸೂದ್ ಕೊಲೆ ಬಿಜೆಪಿ ಬೆಂಬಲಿತರಿಂದ ನಡೆದಾಗ ಸ್ಥಳೀಯ ಶಾಸಕರುಗಳು, ರಾಜ್ಯ ಸರಕಾರ ಸರಿಯಾಗಿ ಸ್ಪಂದಿಸದೆ ತಾತ್ಸಾರದ ಮನೋಭಾವ ತೋರ್ಪಡಿಸಿದ್ದವು. ಕೋಮು ದ್ವೇಷದ ಕೊಲೆಯಾಗಿದ್ದರೂ ನಿಯಮದಂತೆ ಪರಿಹಾರ ನೀಡದಿರುವುದು, ಸ್ಥಳೀಯ ಶಾಸಕರು ಹತ್ಯೆ ಗೀಡಾದ ಮಸೂದ್ ನ ವಿಧವೆ ತಾಯಿಗೆ ಕನಿಷ್ಟ ಸಾಂತ್ವನವನ್ನು ನೀಡದಿರುವುದು ಬಹುದೊಡ್ಡ ಆಡಳಿತ ಲೋಪ. ಇಂತಹ ಕೊಲೆಗಳು ನಡೆದಾಗ ವ್ಯವಸ್ಥೆ, ನಾಗರಿಕ ಸಮಾಜ ಒಕ್ಕೊರಲಿನಿಂದ ಖಂಡಿಸಿದಾಗ ಮತೀಯವಾದಿಗಳ ಚಟುವಟಿಕೆ ಮೊಣಚು ಕಳೆದುಕೊಳ್ಳುತ್ತದೆ. ಆದರೆ ಸರಕಾರವೇ ಮುಂದೆ ನಿಂತ ಇಂತಹ ಸಂದರ್ಭದಲ್ಲಿ ತಾರತಮ್ಯ ಆಚರಿಸುವುದು ಖೇದಕರ. ನರಗುಂದದ ಸಮೀರ್, ಶಿವಮೊಗ್ಗದ ಹರ್ಷ ಕೊಲೆಯ ಸಂದರ್ಭವೂ ಈ ತಾರತಮ್ಯದ ರಾಜಕಾರಣ ಎದ್ದು ಕಂಡಿತ್ತು. ಅಲ್ಪಸಂಖ್ಯಾತರಿಗೆ ವ್ಯಾಪಾರ ಬಹಿಷ್ಕಾರದಂತಹ ಬಲಪಂಥೀಯ ಅಭಿಯಾನದ ಸಂದರ್ಭವೂ ಬಿಜೆಪಿ ಸರಕಾರ ಮೌನ ಬೆಂಬಲದ ಮೂಲಕ ಕರ್ನಾಟಕದ ಸೌಹಾರ್ದ ಪರಂಪರೆಗೆ ಆಳವಾದ ಗಾಯ ಉಂಟು ಮಾಡಿತು. ಆ ಮೂಲಕ ಸರಕಾರದ ಭ್ರಷ್ಟಾಚಾರ, ಬೆಲೆಯೇರಿಕೆ ಮುಂತಾದ ವೈಫಲ್ಯಗಳು ಮರೆ ಮಾಚುವ ಯತ್ನವನ್ನು ಯೋಜನಾಬದ್ದವಾಗಿ ನಡೆಸಲಾಯಿತು. ಅದರ ಪರಿಣಾಮವಾಗಿ ಅಮಾಯಕ ಯುವಕರು ಅನ್ಯಾಯವಾಗಿ ಕೊಲೆಗೀಡಾಗುವ, ಪೋಷಕರು ತಬ್ಬಲಿಗಳಾಗುವ ದುಸ್ಥಿತಿ ನಿರ್ಮಾಣವಾಗಿದೆ.

ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿಯವರು ಈಗಲಾದರು ಎಚ್ಚೆತ್ತುಕೊಂಡು ರಾಜಧರ್ಮ ಪಾಲನೆ ಮಾಡಬೇಕು. ಎಲ್ಲಾ ಬಗೆಯ ಮತೀಯವಾದಿ ಶಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಜರುಗಿಸಬೇಕು. ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ನೇಮಿಸಿ ಪ್ರವೀಣ್ ನೆಟ್ಟಾರ್ ಕೊಲೆಯ ಹಿಂದಿರುವ ಎಲ್ಲಾ ಶಕ್ತಿಗಳನ್ನು ಬಯಲಿಗೆಳೆಯ ಬೇಕು. ಮುಖ್ಯಮಂತ್ರಿಗಳು ಸ್ವತಹ ಬೆಳ್ಳಾರೆಗೆ ಆಗಮಿಸಿ ಮೃತ ಮಸೂದ್ ಹಾಗೂ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸಾಂತ್ವನ ಹೇಳಬೇಕು, ತಾರತಮ್ಯವಿಲ್ಲದೆ ಪರಿಹಾರ ಧನ ಒದಗಿಸಬೇಕು ಆ ಮೂಲಕ ಜನತೆಗೆ ಧೈರ್ಯ ತುಂಬುವ, ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುವ ಕೆಲಸ ಆಗಬೇಕು ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter