ಸುದ್ದಿ9 ಬಜ್ಪೆ: ಎಂಆರ್ಪಿಎಲ್ ಕಂಪೆನಿ ತೈಲಮಿಶ್ರಿತ ತ್ಯಾಜ್ಯ ನೀರನ್ನು ಸಾರ್ವಜನಿಕ ತೋಡಿಗೆ ಬಿಟ್ಟಿರುವ ಘಟನೆ ಜೋಕಟ್ಟೆ ಪರಿಸರದಲ್ಲಿ ಬುಧವಾರ ಮಧ್ಯಾಹ್ನ ಮತ್ತೆ ಬೆಳಕಿಗೆ ಬಂದಿದೆ. ನೀರು ಹರಿಯುವ ತೋಡಿನಲ್ಲಿ ತೈಲಯುಕ್ತ ತ್ಯಾಜ್ಯ ನೀರು ಹರಿಯುತ್ತಿದ್ದುದನ್ನು ಕಂಡ ಸಾರ್ವಜನಿಕರು ಎಂಆರ್ಪಿಎಲ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದೆಯೂ ಎಂಆರ್ಪಿಎಲ್ ಸ್ಥಳೀಯರ ಬಾಳಿನಲ್ಲಿ ಚೆಲ್ಲಾಟವಾಡುವುದನ್ನು ಮುಂದುವರಿಸಿದರೆ ಕಂಪೆನಿಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು `ಸೀ ಆ್ಯಂಡ್ ಸೇ’ ಜೊತೆ ಹೇಳಿಕೊಂಡಿದ್ದಾರೆ.
ಜೋಕಟ್ಟೆ ಪರಿಸರದಲ್ಲಿ ನೀರು ಹರಿಯುವ ತೋಡು ಇದ್ದು, ಇದಕ್ಕೆ ಎಂಆರ್ಪಿಎಲ್ ತೈಲಯುಕ್ತ ತ್ಯಾಜ್ಯವನ್ನು ಸೇರಿಸಿದ ಪರಿಣಾಮ ನೀರಿನ ಬಣ್ಣ ಬದಲಾಗಿದೆ. ತೋಡು ಇಕ್ಕೆಲದಲ್ಲಿನ ಗಿಡಗಂಟಿಗಳು ಕರಟಿಹೋಗಿವೆ. ಸ್ಥಳೀಯ ಮನೆಗಳ ಬಾವಿಯ ನೀರು ಕೂಡಾ ತೈಲಮಿಶ್ರಿತವಾಗಿದ್ದು, ಇದರಿಂದ ಕಂಗಾಲಾದ ಸ್ಥಳೀಯರು ಕಂಪೆನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೋಕಟ್ಟೆಯ ಜನರಿಗೆ ಇಂಥ ಅನುಭವವಾಗುವುದು ಇದೇನೂ ಮೊದಲಲ್ಲ. ಈ ಹಿಂದೆಯೂ ಇದೇ ರೀತಿ ತೈಲಮಿಶ್ರಿತ ತ್ಯಾಜ್ಯವನ್ನು ತೋಡಿಗೆ ಸೇರಿಸಿ ಕಂಪೆನಿ ದಾಷ್ಟ್ರ್ಯವನ್ನು ಪ್ರದಶರ್ಿಸಿತ್ತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಕಂಪೆನಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇದು ನಮ್ಮ ಗಮನಕ್ಕೆ ಬಂದಿಲ್ಲ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯೇನೋ ನೀಡಿದ್ದಾರೆ. ಆದರೆ ಈ ಸಮಸ್ಯೆ ಇಂದು ನಿನ್ನೆಯದ್ದಲ್ಲ ಎನ್ನುವ ನಾಗರಿಕರು ಕಂಪೆನಿ ವಿರುದ್ಧ ಹೋರಾಟ ಸಂಘಟಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.






