ಪಂಜಿಕಲ್ಲು: ಗ್ರಾಮ ಪಂಚಾಯಿತಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಜನಸಾಮಾನ್ಯರ ಅಹವಾಲು ಕೇಳುವವರೇ ಇಲ್ಲ: ಮಾಜಿ ಸಚಿವ ರೈ ಬೇಸರ
ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಗ್ರಾಮ ಪಂಚಾಯಿತಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು. ಸುದರ್ಶನ್ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದಾರೆ.
ಪಂಜಿಕಲ್ಲು ಗ್ರಾಮದ ಪುಂಚೋಡಿ ನಿವಾಸಿ ಪುಷ್ಪಾವತಿ ಹೆಗ್ಡೆ ಎಂಬವರ ಮನೆ ಗೇಟಿಗೆ ಬೀಗ ಹಾಕಿದ ಗ್ರಾಮ ಪಂಚಾಯಿತಿ ಕಾರ್ಯವೈಖರಿ ವಿರುದ್ಧ ಸಂಬಂಧಪಟ್ಟವರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಾನು ಸಚಿವನಾಗಿದ್ದ ವೇಳೆ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದ್ದು, ಇದೀಗ ಜನಸಾಮಾನ್ಯರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಬೇಸರ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ವಲಯ ಕಾಂಗ್ರೆಸ್ ಸಮಿತಿ, ಭ್ರಷ್ಟಾಚಾರ ಮತ್ತು ದೌರ್ಜನ್ಯ ವಿರೋಧಿ ಸಮಿತಿ ವತಿಯಿಂದ ಪಂಜಿಕಲ್ಲು ಗ್ರಾಮ ಪಂಚಾಯಿತಿ ಎದುರು ‘ ಭ್ರಷ್ಟಾಚಾರ ಸಹಿತ ಅವ್ಯವಹಾರ ಮತ್ತು ಬಡವರ, ಹಿಂದುಳಿದ ವರ್ಗ ಮತ್ತು ಶೋಷಿತ ವರ್ಗಗಳ ಮೇಲೆ ರಾಜಕೀಯ ದುರುದ್ದೇಶದಿಂದ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕುಗ್ರಾಮವಾಗಿದ್ದ ಪಂಜಿಕಲ್ಲು ಗ್ರಾಮ ದತ್ತು ಸ್ವೀಕರಿಸಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಕೇಂದ್ರ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಂಜೂರು ಸಹಿತ ಸಮಗ್ರ ಕುಡಿಯುವ ನೀರಿನ ಯೋಜನೆ ಮತ್ತು ಹಲವಾರು ರಸ್ತೆಗಳ ಅಭಿವೃದ್ಧಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿದೆ ಎಂದರು.
ಇದೇ ಗ್ರಾಮದ ಮುಕುಡ ಎಂಬಲ್ಲಿ ಈಚೆಗೆ ನಡೆದ ಗುಡ್ಡ ಕುಸಿತದಿಂದ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಮನೆ ಮಾಲೀಕರ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿರುವುದು ನಾಚಿಕೆಗೇಡು ಎಂದು ಅವರು ಟೀಕಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುದರ್ಶನ್ ಜೈನ್, ದೇವಪ್ಪ ಕುಲಾಲ್, ಮಾಜಿ ಸದಸ್ಯ ಜಗದೀಶ್ ಕೊಯಿಲ ಮಾತನಾಡಿದರು.
ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಪಿಯೂಸ್ ಎಲ್.ರಾಡ್ರಿಗಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುರೇಶ ಜೋರ, ಸದಾನಂದ ಶೆಟ್ಟಿ, ಮೋಹನ್ ಶೆಟ್ಟಿ, ಪ್ರವೀಣ್ ಅಮೈ, ವಾಲ್ಟರ್ ನೊರೋನ್ಹ, ರಾಜೇಶ್ ಗೌಡ, ಪದ್ಮಾವತಿ ವಿ.ಪೂಜಾರಿ, ದಿನೇಶ್ ಶೆಟ್ಟಿ ಬುಡೋಳಿ, ವಿಕ್ಟರ್, ಜಗದೀಶ್, ಕೃಷ್ಣಪ್ಪ ಕುಲಾಲ್ ಮತ್ತಿತರರು ಇದ್ದರು.
ಅವ್ಯವಹಾರಕ್ಕೆ ದಾಖಲೆ ನೀಡಿ: ಗ್ರಾ.ಪಂ.ಅಧ್ಯಕ್ಷ ಸವಾಲು
ಬಂಟ್ವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಯಾವುದೇ ಕಾಮಗಾರಿಯಲ್ಲಿ ಅವ್ಯವಹಾರ ಅಥವಾ ಭ್ರಷ್ಟಾಚಾರ ನಡೆದಿದ್ದರೆ ಕಾಂಗ್ರೆಸ್ ಇದಕ್ಕೆ ಸೂಕ್ತ ದಾಖಲೆ ಒದಗಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವ ಪೂಜಾರಿ ಸವಾಲು ಹಾಕಿದ್ದಾರೆ. ಗ್ರಾಮ ಪಂಚಾಯಿತಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇವಲ ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ಪ್ರತಿಭಟನೆ ಹೆಸರಿನಲ್ಲಿ ಡೊಂಬರಾಟ ನಡೆಸುತ್ತಿದೆ ಎಂದು ಲೇವಡಿ ಮಾಡಿದರು.
ಬೀಗ ಹಾಕಿಲ್ಲ:
ಗ್ರಾಮ ಪಂಚಾಯಿತಿಗೆ ಸೇರಿದ ಜಮೀನಿಗೆ ಮಾತ್ರ ಬೀಗ ಹಾಕಿ ರಕ್ಷಿಸಲಾಗಿದ್ದು, ಯಾವುದೇ ಖಾಸಗಿ ವ್ಯಕ್ತಿಗಳ ಜಮೀನಿಗೆ ಬೀಗ ಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಮೋಹನ್ ದಾಸ್, ಲಕ್ಮೀನಾರಾಯಣ ಗೌಡ, ಬಾಲಕೃಷ್ಣ ಪೂಜಾರಿ, ನಳಿನಿ ಪ್ರಸಾದ್, ವಿಕೇಶ್, ಹರೀಶ್ ಪೂಜಾರಿ, ಪೂವಪ್ಪ ಮೆಂಡನ್, ಗೋಪಾಲ ಕುಲಾಲ್, ರೂಪಶ್ರೀ, ಚಿತ್ರಾಕ್ಷಿ, ಚಂದ್ರಾವತಿ, ಶೋಭ ಇದ್ದರು.