ವಿದ್ಯಾರ್ಥಿಗಳ ಯಶಸ್ಸಿಗೆ ಅಭ್ಯುದಯ ಸಹಕಾರಿಯಾಗಲಿ : ಎಂ.ಟಿ. ಹೆಬ್ಬಾರ್
ಬಂಟ್ವಾಳ : ಮೈಯಲ್ಲಿ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಆದರೆ ಕೈಯಲ್ಲೊಂದು ಪುಸ್ತಕ ಇರಲಿ ಎಂದು ಬಕೀಂಚಂದ್ರ ಚಟರ್ಜಿಯವರ ಮಾತಿನಂತೆ ಬಾಲ್ಯದಲ್ಲಿಯೇ ಮಕ್ಕಳಿಗೆ ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸವನ್ನು ಮಾಡಬೇಕು. ಒಳ್ಳೆಯದಾಗಬೇಕೆಂಬ ಆಸೆ ಇರಬೇಕು.
ಎಲ್ಲರ ಯಶಸ್ಸಿಗೆ ಈ ಅಭ್ಯುದಯ ಸಹಕಾರಿಯಾಗಲಿ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಹೇಳಿದರು.ಅವರು ಶನಿವಾರ ನಲ್ಕೆಮಾರ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳೇ ಬರೆದ ಅಭ್ಯುದಯ ವಿಶೇಷಾಂಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಇದರ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ ರೋಟರಿ ಕ್ಲಬ್ ಸಂಸ್ಥೆಯಿಂದ ನಲ್ಕೆಮಾರ್ ಶಾಲೆಗೆ ವಿಶೇಷ ಕಾಳಜಿ ವಹಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯ ಜಯರಾಮ್ ಶಾಲಾ ಮಕ್ಕಳಿಗೆ ಐಡ್ ಕಾರ್ಡ್ ವಿತರಣೆ ಮಾಡಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ಯಾದವ ಅಗ್ರಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಪ್ರಜ್ಞಾ, ಶರಣ್ಯ, ವೈಷ್ಣವಿ, ರತನ್, ಭವಿಷ್ ಪ್ರಾರ್ಥನೆ ಹಾಡಿದರು. ಮುಖ್ಯ ಶಿಕ್ಷಕಿ ಜ್ಯೋತಿ ಸ್ವಾಗತಿಸಿದರು.