ಶತಾಯುಷಿ ಬಡಾಜೆಗುತ್ತು ಬಾಲಕೃಷ್ಣ ಶೆಟ್ಟಿ ಇನ್ನಿಲ್ಲ
ಬಂಟ್ವಾಳ: ಅಮ್ಟಾಡಿ ಗ್ರಾಮದ ಪ್ರತಿಷ್ಠಿತ ಬಡಾಜೆಗುತ್ತು ನಿವಾಸಿ, ಕಾರಣಿಕ ಪ್ರಸಿದ್ಧ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ದೈವದ ಗುರಿಕಾರ ಶತಾಯುಷಿ ಬಡಾಜೆಗುತ್ತು ಬಾಲಕೃಷ್ಣ ಶೆಟ್ಟಿ (೧೦೦) ಇವರು ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ಗುರುವಾರ ನಿಧನರಾದರು.
ಮೃತರು ಪ್ರಗತಿಪರ ಕೃಷಿಕರಾಗಿ, ಕೊಡುಗೈ ದಾನಿಯಾಗಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಸ್ಥಾಪಕ ನಿರ್ದೇಶಕರಾಗಿ, ಅಮ್ಟಾಡಿ ಮಂಡಲ ಪ್ರಧಾನರಾಗಿ ಗುರುತಿಸಿಕೊಂಡಿದ್ದರು. ಮೃತರಿಗೆ ಪುತ್ರ ಅಮ್ಟಾಡಿ ಮಂಗ್ಲಿಮಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆಗುತ್ತು ಸಹಿತ ಇಬ್ಬರು ಪುತ್ರಿಯರು ಇದ್ದಾರೆ. ಬಡಾಜೆಗುತ್ತು ಮೈದಾನದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ನಡೆದ ‘ಶತ ಸಂಭ್ರಮ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಾವಿರಾರು ಮಂದಿ ನಾಗರಿಕರು ಇವರಿಗೆ ಅಭಿನಂದನೆ ಸಲ್ಲಿಸಿದ್ದರು.