ಅಜ್ಜಿಬೆಟ್ಟು ಬಸದಿ: ಮುನಿಶ್ರೀ ‘ಭವ್ಯ ಮಂಗಲ ವರ್ಷಾಯೋಗ ಸಹಿತ ಚಾತುರ್ಮಾಸ’ ಶ್ರೀ ಪದ್ಮಾವತಿ ಸಭಾಭವನ ಲೋಕಾರ್ಪಣೆ ಧಾರ್ಮಿಕತೆಯಿಂದ ಶಾಶ್ವತ ಸುಖ ಪ್ರಾಪ್ತಿ: ಡಾ.ಹೆಗ್ಗಡೆ
ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಅತಿಶಯ ಕ್ಷೇತ್ರ ಅಜ್ಜಿಬೆಟ್ಟು ಅಜ್ಜಿಬೆಟ್ಟು ಭಗವಾನ್ ೧೦೦೮ ಆದಿನಾಥ ತೀರ್ಥಂಕರರ ಬಸದಿಯಲ್ಲಿ ಜು.14ರಂದು ಗುರುವಾರ ನಡೆದ ಮುನಿಶ್ರೀ ೧೦೮ ದಿವ್ಯಸಾಗರ ಮಹಾರಾಜರ ‘ಭವ್ಯ ಮಂಗಲ ವರ್ಷಾಯೋಗ ಸಹಿತ ಚಾತುರ್ಮಾಸ ನಿಮಿತ್ತ ಕಲಶ ಸ್ಥಾಪನಾ ಮಹೋತ್ಸವಕ್ಕೆ ಚಾಲನೆ ಮತ್ತು ನೂತನವಾಗಿ ನಿರ್ಮಾಣಗೊಂಡ ಶ್ರೀ ಪದ್ಮಾವತಿ ಸಭಾಭವನ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುನಿಶ್ರೀ ೧೦೮ ದಿವ್ಯಸಾಗರ ಮಹಾರಾಜರು ಆಶೀರ್ವಚನ ನೀಡದರು. ಡಾ.ಡಿ.ವೀರೇಂದ್ರ ಹೆಗ್ಗಡೆ, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರರು ಇದ್ದಾರೆ.
ಬಂಟ್ವಾಳ ಮುಂದಿನ ಪೀಳಿಗೆಯನ್ನು ಧರ್ಮದ ಕಡೆಗೆ ಆಕರ್ಷಿಸುವುದರ ಜೊತೆಗೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಧಾರ್ಮಿಕತೆಯಿಂದ ಮನಶಾಂತಿ ಮತ್ತು ಶಾಶ್ವತ ಸುಖ ಪ್ರಾಪ್ತಿಯಾಗುತ್ತದೆ ಎಂಬ ನೈಜ ಸತ್ಯ ಜಿನ ಮಂದಿರಗಳ ಮೂಲಕ ತಿಳಿಸುವ ಪ್ರಯತ್ನ ನಡೆಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಗೌರವ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಇಲ್ಲಿನ ವಾಮದಪದವು ಸಮೀಪದ ಅತಿಶಯ ಕ್ಷೇತ್ರ ಅಜ್ಜಿಬೆಟ್ಟು ಅಜ್ಜಿಬೆಟ್ಟು ಭಗವಾನ್ ೧೦೦೮ ಆದಿನಾಥ ತೀರ್ಥಂಕರರ ಬಸದಿಯಲ್ಲಿ ಗುರುವಾರ ನಡೆದ ಮುನಿಶ್ರೀ ೧೦೮ ದಿವ್ಯಸಾಗರ ಮಹಾರಾಜರ ‘ಭವ್ಯ ಮಂಗಲ ವರ್ಷಾಯೋಗ ಸಹಿತ ಚಾತುರ್ಮಾಸ ನಿಮಿತ್ತ ಕಲಶ ಸ್ಥಾಪನಾ ಮಹೋತ್ಸವಕ್ಕೆ ಚಾಲನೆ ಮತ್ತು ನೂತನವಾಗಿ ನಿರ್ಮಾಣಗೊಂಡ ಶ್ರೀ ಪದ್ಮಾವತಿ ಸಭಾಭವನ ‘ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸ್ವಾರ್ಥ ಮತ್ತು ದ್ವೇಶದಿಂದ ಕೂಡಿದ ವ್ಯವಹಾರ ತಾತ್ಕಾಲಿಕ ಸಂತೋಷ ನೀಡಿದರೆ, ಭಗವಂತನ ಆರಾಧನೆ ಶಾಶ್ವತ ಸುಖ ನೀಡುತ್ತದೆ. ಈ ಬಗ್ಗೆ ಮುನಿಶ್ರೀ ಅವರ ಚಾರ್ತುಮಾಸದಲ್ಲಿ ಭಕ್ತರ ಸಂದೇಹಗಳಿಗೆ ಪರಿಹಾರ ಸಿಗಲಿದೆ ಎಂದರು.
ರಾಜಕೀಯ ಇಲ್ಲ, ಪ್ರಧಾನಿ ಮೋದೀಜಿಗೆ ಕೃತಜ್ಞತೆ:
ನಾನು ಎಂದಿಗೂ ರಾಜಕೀಯವಾಗಿ ಗುರುತಿಸಿಕೊಳ್ಳಲು ಬಯಸುವುದಿಲ್ಲ. ಆದರೆ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವಂತೆ ನನ್ನ ಸಾಮಾಜಿಕ ಸೇವೆ ಗುರುತಿಸಿ ರಾಜ್ಯಸಭೆಗೆ ಗೌರವ ಸದಸ್ಯನನ್ನಾಗಿ ನೇಮಕಗೊಳಿಸಿದ ಪ್ರಧಾನಿ ನರೇಂದ್ರ ಮೋದೀಜಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇಶವ್ಯಾಪಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಿಸ್ತರಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ಮುನಿಶ್ರೀ ೧೦೮ ದಿವ್ಯಸಾಗರ ಮಹಾರಾಜ ಆಶೀರ್ವಚನ ನೀಡಿ, ‘ಆಧುನಿಕ ಜಗತ್ತಿನಲ್ಲಿ ಧರ್ಮದ ಅನುಷ್ಠಾನ ಅಗತ್ಯವಿದ್ದು, ಚಾತುರ್ಮಾಸದಲ್ಲಿ ಚತುರ್ವಿಧ ಆರಾಧನೆಗಳ ಮೂಲಕ ಉತ್ತಮ ಗುಣಗ್ರಾಹಿ ಜೀವನ ನಡೆಸಲು ಸಾಧ್ಯವಿದೆ ಎಂದರು.
ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಆಶೀರ್ವಚನ ನೀಡಿ, ದಿಗಂಬರ ಮುನಿವರ್ಯರು ಮಾತನಾಡುವ ಮತ್ತು ನಡೆದಾಡುವ ದೇವರಿದ್ದಂತೆ. ಸರ್ವ ಧರ್ಮ ಸಮನ್ವತೆಯ ಭಾರತ ದೇಶವನ್ನು ಮಾತೃಸ್ಥಾನದಲ್ಲಿ ಕಾಣಬೇಕು ಎಂದರು.
ಮೂಡುಬಿದ್ರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿ ಆಶೀರ್ವಚನ ನೀಡಿ, ಸಮಾಜದಲ್ಲಿ ಯೋಗ್ಯ ವ್ಯಕ್ತಿಯಾಗಿ ಬದುಕಲು ಮತ್ತು ಸುಜ್ಞಾನ ಬೆಳೆಸಿಕೊಳ್ಳಲು ಪ್ರತೀ ಹಳ್ಳಿಗಳಲ್ಲಿಯೂ ಮುನಿಶ್ರೀ ಚಾರ್ತುಮಾಸ ನಡೆದು ಪ್ರವಚನ ಸಿಗಬೇಕು ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಜೈನ ಧರ್ಮದ ‘ಅಹಿಂಸೋ ಪರಮೋ ಧರ್ಮ’ ಎಲ್ಲರಿಗೂ ಅನ್ವಯವಾಗುತ್ತದೆ ಎಂದರು.
ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ರಾಜೇಂದ್ರ, ಸಮಿತಿ ಪದಾಧಿಕಾರಿ ಉದಯಕುಮಾರ್ ಕಟ್ಟೆಮಾರ್, ಅರುಣ್ ಕುಮಾರ್ ಇಂದ್ರ, ವೃಷಭರಾಜ್ ಜೈನ್ ಇದ್ದರು. ಇದೇ ವೇಳೆ ಸಮಿತಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಮದ ಡಾ.ಹೆಗ್ಗಡೆ ಅವರನ್ನು ಸನ್ಮಾನಿಸಲಾಯಿತು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಮುನಿಶ್ರೀ ಅವರಿಂದ ಆಶೀರ್ವಾದ ಸ್ವೀಕರಿಸಿದರು.
ಭರತ್ ರಾಜ್ ಜೈನ್ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಸ್ವಾಗತಿಸಿ, ಯುವರಾಜ ಆಳ್ವ ವಂದಿಸಿದರು. ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.