ಬಂಟ್ವಾಳ: ವಿವಿಧೆಡೆ ಭೂ ಕುಸಿತ, ರಸ್ತೆ -ಮನೆಗಳಿಗೆ ಹಾನಿ ಶಾಸಕ ರಾಜೇಶ ನಾಯ್ಕ್ ವೀಕ್ಷಣೆ
ಬಂಟ್ವಾಳ: ತಾಲ್ಲೂಕಿನ ಪುರಸಭಾ ವ್ಯಾಪ್ತಿಯ ಗೂಡಿನಬಳಿ ಸಮೀಪದ ಟಿಪ್ಪು ರಸ್ತೆ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿರುವುದನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮಂಗಳವಾರ ಭೇಟಿ ನೀಡಿ ವೀಕ್ಷಿಸಿದರು.
ಬಂಟ್ವಾಳ ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಲ್ಲಿ ನಿರಂತರ ಮಳೆ ಸುರಿದ ಪರಿಣಾಮ ಬಹುತೇಕ ಕಡೆಗಳಲ್ಲಿ ಭೂಕುಸಿತ ಉಂಟಾಗಿ ಮನೆ, ರಸ್ತೆ, ಬೆಳೆ ಹಾನಿಗೀಡಾಗಿ ಅಪಾರ ನಷ್ಟ ಉಂಟಾಗಿದೆ. ಇಲ್ಲಿನ ಕಾವಳಪಡೂರು, ಅರಳ, ಸಂಗಬೆಟ್ಟು ,ಕಾಡಬೆಟ್ಟು, ಗೂಡಿನಬಳಿ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ವಿವಿಧೆಡೆ ಹಾನಿಯಾದ ಪ್ರದೇಶಗಳಿಗೆ ಮಂಗಳವಾರ ತೆರಳಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದ್ದು, ಹಾನಿಗೀಡಾದ ಸಂತ್ರಸ್ತರಿಗೆ ಸರ್ಕಾರದಿಂದ ಸೂಕ್ತ ಪರಿಹಾರಧನ ಒದಗಿಸಲು ಶ್ರಮಿಸುವುದಾಗಿ ತಿಳಿಸಿದ್ದರು.
ಕಾವಳಮೂಡೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಜಿತ್ ಕುಮಾರ್, ಸದಸ್ಯರಾದ ಶರ್ಮಿತ್ ಜೈನ್, ಪ್ರಮೋದ್ ಕುಮಾರ್ ರೈ, ದಿನೇಶ್ ಕಾಡಬೆಟ್ಟು, ಜಿನೇಂದ್ರ ಜೈನ್, ಪಿಡಿಒ ಪಂಕಜಾ ಶೆಟ್ಟಿ, ಗ್ರಾಮ ಕರಣಿಕೆ ಆಶಾ ಮೆಹಂದಲೆ, ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಮೀಧರ ಶೆಟ್ಟಿ, ಸದಸ್ಯರಾದ ಜಗದೀಶ್ ಅಳ್ವ, ಉಮೇಶ್ ಅರಳ, ಪ್ರಸನ್ನ ಶೆಟ್ಟಿ, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಕರಣಿಕ ಅಮೃತಾಂಶು, ಪಿಡಿಒ ಧರ್ಮರಾಜ್, ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ವಿಮಲ ಮೋಹನ್, ಗ್ರಾಮ ಕರಣಿಕ ಪರೀಕ್ಷಿತ್ ಶೆಟ್ಟಿ, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಡೊಂಬಯ ಅರಳ, ಸುದರ್ಶನ್ ಬಜ, ರತ್ನಕುಮಾರ್ ಚೌಟ, ವಸಂತ ಕುಮಾರ್ ಅಣ್ಣಳಿಕೆ ಮತ್ತಿತರರು ಇದ್ದರು.