ಬಂಟ್ವಾಳ: ವಿವಿಧೆಡೆ ಭೂಕುಸಿತ, ಮಳೆಹಾನಿ ಮಾಜಿ ಸಚಿವ ರೈ ಭೇಟಿ, ವೀಕ್ಷಣೆ
ಬಂಟ್ವಾಳ: ತಾಲ್ಲೂಕಿನ ವಿವಿಧೆಡೆ ಉಂಟಾಗಿರುವ ಭೂಕುಸಿತ ಮತ್ತಿತರ ಹಾನಿಗೀಡಾದ ಪ್ರದೇಶಗಳಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಸೋಮವಾರ ಭೇಟಿ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಇದ್ದಾರೆ.
ಇಲ್ಲಿನ ಪಂಜಿಕಲ್ಲು ಗ್ರಾಮದ ಮುಕ್ಕುಡ ಸಹಿತ ವಿವಿಧೆಡೆ ಉಂಟಾಗಿರುವ ಭೂಕುಸಿತ ಮತ್ತಿತರ ಹಾನಿಗೀಡಾದ ಪ್ರದೇಶಗಳಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿರಂತರ ಮಳೆಯಿಂದ ಇಲ್ಲಿನ ಅರಳ, ಕಾವಳಪಡೂರು, ಕಾಡಬೆಟ್ಟು, ಮೂಡನಡುಗೋಡು, ಕಾವಳಮೂಡೂರು, ಪಂಜಿಕಲ್ಲು ಮತ್ತಿತರ ಕಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಪುರಸಭಾ ವ್ಯಾಪ್ತಿಯ ಗೂಡಿನಬಳಿ ಟಿಪ್ಪು ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಇಂತಹ ಕಡೆಗಳಲ್ಲಿ ತ್ವರಿತವಾಗಿ ಸ್ಪಂದಿಸಿ ರಸ್ತೆ ಪುನರ್ ರಚಿಸುವುದರ ಜೊತೆಗೆ ಸಂತ್ರಸ್ತರಿಗೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಆಗ್ರಹಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ. ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಚಂದ್ರಶೇಖರ್ ಕರ್ಣ, ಮಾಣಿಕ್ಯರಾಜ್ ಜೈನ್, ಜನಾರ್ದನ್ ಸಪಲ್ಯ ಮತ್ತಿತರರು ಇದ್ದರು.