ಬಂಟ್ವಾಳ: ಪ್ರಾಕೃತಿಕ ವಿಕೋಪ ತಡೆಗೆ ಸಜ್ಜಾಗಲು ಸೂಚನೆ ಗೂಗಲ್ ಸಭೆ ನಡೆಸಿದ ಶಾಸಕ ರಾಜೇಶ ನಾಯ್ಕ್
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಶಾಸಕರ ಕಚೇರಿಯಲ್ಲಿ ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಜು.08ರಂದು ಶುಕ್ರವಾರ ಗೂಗಲ್ ಸಭೆ ನಡೆಸಿದರು. ತಹಶೀಲ್ದಾರ್ ಡಾ.ಸ್ಮಿತಾ ರಾಮು, ಇಒ ರಾಜಣ್ಣ ಇದ್ದಾರೆ.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೩೯ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರು ಸೇರಿದಂತೆ ಪಿಡಿಒ ಮತ್ತು ಗ್ರಾಮಕರಣಿಕರೊಂದಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶುಕ್ರವಾರ ಗೂಗಲ್ ಸಭೆ ನಡೆಸಿದರು.
ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಟಾಸ್ಕ್ ಫೋಸ್ ð ಸಮಿತಿ ಜೊತೆಗೆ ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಮುಳುಗಡೆ ಭೀತಿ ಎದುರಿಸುವಲ್ಲಿ ಗ್ರಾಮಕರಣಿಕರು ಮತ್ತು ಪಿಡಿಒ ಗಮನ ಹರಿಸಿ ಅಲ್ಲಿನ ಕುಟುಂಬಗಳನ್ನು ಮನವೊಲಿಸಿ ಗಂಜಿ ಕೇಂದ್ರ ಅಥವಾ ಅವರ ಸಂಬಂಧಿಕರ ಮನೆಗೆ ಸ್ಥಳಾಂತರಿಸಬೇಕು ಎಂದರು.
ಈಗಾಗಲೇ ೮ ಗಂಜಿಕೇಂದ್ರ ತೆರೆಯಲಾಗಿದ್ದು, ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಡಾ.ಸ್ಮಿತಾ ರಾಮು ತಿಳಿಸಿದರು. ತಾಲ್ಲೂಕು ಪಂಚಾಯಿತಿ ಇಒ ರಾಜಣ್ಣ ಮಾತನಾಡಿ, ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹರಿಯುವ ನೀರು ಚರಂಡಿಯಲ್ಲಿ ಹರಿಯುವಂತೆ ಸರಿಪಡಿಸಬೇಕು ಎಂದರು.
ಪಂಜಿಕಲ್ಲು ಗ್ರಾಮ ಪಂಚಾಯಿತಿನಲ್ಲಿ ೫೦ ಮಂದಿ ಯುವಕರ ತುರ್ತು ಸೇವಾ ತಂಡ ಅಸ್ತಿತ್ವಕ್ಕೆ ಬಂದಿದ್ದು, ಇದೇ ಮಾದರಿ ಎಲ್ಲೆಡೆ ತಂಡ ರಚಿಸಿ ಮಳೆ, ಪ್ರವಾಹ, ಭೂಕುಸಿತ ಮತ್ತಿತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬಹುದು ಎಂದು ಶಾಸಕರು ಸಲಹೆ ನೀಡಿದರು. ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಇದ್ದರು.