ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ ಸಂಚಾರವೇ ದುಸ್ತರ ಹೆದ್ದಾರಿ ವಿಸ್ತರಣೆ, ಮೇಲ್ಸೇತುವೆಗೆ ಅಗೆದ ಹೊಂಡಕ್ಕೆ ಬೀಳುವ ಭೀತಿ
ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ನಡುವೆ ಮೇಲ್ಸೇತುವೆ ನಿರ್ಮಾಣ ಮತ್ತು ರಸ್ತೆ ವಿಸ್ತರಣೆ ನೆಪದಲ್ಲಿ ಎಲ್ಲೆಡೆ ಅಗೆದು ಹಾಕಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಕಲ್ಲಡ್ಕ ಪೇಟೆಯಲ್ಲಿ ಹಾದು ಹೋಗಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಅಲ್ಲಲ್ಲಿ ಹೊಂಡ ಕೊರೆಯಲಾಗಿದ್ದು, ಪ್ರತಿದಿನ ರಸ್ತೆಯಲ್ಲಿ ಲಾರಿ ಮತ್ತಿತರ ವಾಹನ ಹೂತು ಹೋಗುತ್ತಿದೆ.
ಶುಕ್ರವಾರ ಬೆಳಿಗ್ಗೆ ಲಾರಿಯೊಂದು ಕೆಸರಿನಲ್ಲಿ ಹೂತು ಹೋದ ಪರಿಣಾಮ ಸುಮಾರು ಮೂರು ತಾಸು ವಾಹನ ಸಂಚಾರಕ್ಕೆ ಅಡ್ಡಿಯಾಗಿ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯುದ್ದಕ್ಕೂ ಅಗೆದು ಹಾಕಿದ್ದು, ಕೆಲವೆಡೆ ಹೊಂಡ ಕೊರೆಯಲಾಗಿದೆ. ಇದರಿಂದಾಗಿ ಕೆಸರುಮಯ ರಸ್ತೆಯಲ್ಲಿ ಸಾವಗುವ ವಾಹನ ಸವಾರರು ಅಪಘಾತ ಮತ್ತು ಹೊಂಡಕ್ಕೆ ಬೀಳುವುದರ ಜೊತೆಗೆ ಕೆಸರಿನಲ್ಲಿ ಪ್ರತಿದಿನ ವಿವಿಧ ವಾಹನಗಳು ಸಿಲುಕಿಕೊಳ್ಳುತ್ತಿದೆ. ಸಂಚಾರ ಸುಗಮಗೊಳಿಸಲು ಮೆಲ್ಕಾರ್ ಸಂಚಾರಿ ಠಾಣೆ ಎಸೈ ಮೂರ್ತಿ ಸೇರಿದಂತೆ ವಿವಿಧ ಪೊಲೀಸರು ಪ್ರತಿದಿನ ಹರ ಸಾಹಹ ಪಡುವಂತಾಗಿದೆ.
ಈ ನಡುವೆ ಗುತ್ತಿಗೆ ವಹಿಸಿಕೊಂಡ ಕೆಎನ್‌ಆರ್ ಕಂಪೆನಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದರೂ ನಿರಂತರ ಮಳೆಯಿಂದ ಅದೆಲ್ಲಾ ಕೊಚ್ಚಿ ಹೋಗಿದೆ. ಇಲ್ಲಿನ ಪಾಣೆಮಂಗಳೂರು ಕಲ್ಲುರ್ಟಿ ಗುಡಿಯಿಂದ ಮೆಲ್ಕಾರ್-ಕಲ್ಲಡ್ಕ ದಾಸರಕೋಡಿ ತನಕ ವಾಹನ ಸಂಚಾರಕ್ಕೆ ಪ್ರತಿದಿನ ಅಡ್ಡಿಯಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.