ಪಂಜಿಕಲ್ಲು: ಗುಡ್ಡದ ಮಣ್ಣು ಕುಸಿತ ಪ್ರಕರಣ ಮೂವರ ಮೃತದೇಹ ಕೇರಳಕ್ಕೆ ಕೊಂಡೊಯ್ದ ಕುಟುಂಬಿಕರು ಗಾಯಾಳು ಜಾನಿ ಕಣ್ಣೂರು ಚೇತರಿಕೆ
ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಗುಡ್ಡ ಕುಸಿತದಿಂದ ಮೂವರು ಸಾವನ್ನಪ್ಪಿದ ಹೆನ್ರಿ ಕಾರ್ಲೊ ಮನೆಗೆ ಬಾರಿ ಮಾಜಿ ಸಚಿವ ಬಿ. ರಮಾನಾಥ ರೈ ಶುಕ್ರವಾರ ಭೇಟಿ ನೀಡಿದರು. ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಸುದರ್ಶನ್ ಜೈನ್, ಸುರೇಶ್ ಜೋರ ಮತ್ತಿತರರು ಇದ್ದರು.
ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಹೆಂಚಿನ ಶೆಡ್ ನಲ್ಲಿ ವಾಸವಾಗಿದ್ದ ಕೇರಳದ ನಾಲ್ವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಪೈಕಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹ ಅವರ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ.
ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಿಜು ಪಾಲಕ್ಕಾಡ್ (೪೫) ಸೇರಿದಂತೆ ಮಂಗಳೂರು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ ಸಂತೋಷ್ ಅಲಪುಝ(೪೬) ಮತ್ತು ಬಾಬು ಕೊಟ್ಟಯಂ( ೪೪) ಇವರ ಮೃತದೇಹವನ್ನು ಕುಟುಂಬಿಕರು ಕೇರಳಕ್ಕೆ ಕೊಂಡೊಯ್ದಿದ್ದಾರೆ.
ಉಳಿದಂತೆ ಮೊಣಕಾಲು ತನಕ ಮಣ್ಣು ತುಂಬಿಕೊಂಡು ಆರಂಭದಲ್ಲೇ ಹೊರ ತೆಗೆದು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಾನಿ ಕಣ್ಣೂರು ಚೇತರಿಸಿಕೊಂಡಿದ್ದಾರೆ. ಇವರಿಗೆ ಕಾಲಿಗೆ ಮಾತ್ರ ಸ್ವಲ್ಪ ಗಾಯಗೊಂಡಿದ್ದು, ಗುಣಮುಖರಾದ ಕೂಡಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವರು ಎಂದು ತಾಲ್ಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ಉಮೇಶ ಅಡ್ಯಂತಾಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಇನ್ನೊಂದೆಡೆ ಗ್ರಾಮಕರಣಿಕ ಕುಮಾರ್ ಅವರು ಮೌಖಿಕವಾಗಿ ನೀಡಿದ ಮುನ್ನೆಚ್ಚರಿಕೆ ನಿರ್ಲಕ್ಷಿದ್ದಾರೆ ಎಂಬ ಆರೋಪದಡಿ ಮನೆ ಒಡತಿ ಬೆನಡಿಕ್ಟ್ ಕಾರ್ಲೊ ವಿರುದ್ಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಡುವೆ ಗ್ರಾಕರಣಿಕರು ಅಥವಾ ಯಾವುದೇ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಬೆನಡಿಕ್ಟ್ ಕಾರ್ಲೊ ಆರೋಪಿಸಿದ್ದಾರೆ.