ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಮತ್ತು ರಾಯಿ ಮತ್ತಿತರ ಪ್ರದೇಶಗಳ ಯುವಕರ ತಂಡವು ಅಮರನಾಥ ಯಾತ್ರೆಗೆ ತೆರಳಿ ಸುರಕ್ಷಿತವಾಗಿದ್ದಾರೆ. ಇಲ್ಲಿನ ನರಿಕೊಂಬು ಸೇರಿದಂತೆ ರಾಯಿ ಮತ್ತು ಸಜಿಪ ಮತ್ತಿತರ ಕಡೆಗಳಿಂದ ಜು.05ರಂದು ಮಂಗಳವಾರ ಅಮರನಾಥ ಯಾತ್ರೆ ಕೈಗೊಂಡಿದ್ದ ೩೦ ಮಂದಿ ಯುವಕರ ತಂಡವು ಮೇಘಸ್ಪೋಟ ಸಂಭವಿಸಿದ ಸ್ಥಳದಿಂದ ೨೮ ಕಿ.ಮೀ.ದೂರದಲ್ಲಿ ಸುರಕ್ಷಿತರಾಗಿ ಇರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಮೇಘ ಸ್ಪೋಟದಿಂದ ೧೫ಕ್ಕೂ ಮಿಕ್ಕಿ ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರಾಜ್ಯದಿಂದ ತೆರಳಿದ್ದ ಹಲವಾರು ಮಂದಿ ಕುಟುಂಬಗಳು ಆತಂಕಕ್ಕೆ ಈಡಾಗಿದ್ದರು. ಕಳೆದ ಮಂಗಳವಾರ ರೈಲು ಮಾರ್ಗವಾಗಿ ತೆರಳಿದ್ದ ಇಲ್ಲಿನ ೩೦ ಮಂದಿ ತಂಡವು ೨೮ ಕಿ.ಮೀ.ದೂರದಲ್ಲಿ ಅಲ್ಲಿನ ರಕ್ಷಣಾ ಪಡೆಗಳ ಸುಪರ್ದಿಯಲ್ಲಿ ಸುರಕ್ಷಿತರಾಗಿರುವ ಬಗ್ಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅವರಿಗೆ ಶನಿವಾರ ಮಾಹಿತಿ ನೀಡಿದ್ದಾರೆ.
ಇಲ್ಲಿನ ಬೂಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಭಾನುವಾರ ಬೆಳಿಗ್ಗೆ ೫ಗಂಟೆಗೆ ಮತ್ತೆ ಅಮರನಾಥ ಯಾತ್ರೆ ಮುಂದುವರಿಸಲು ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಯಾತ್ರಿ ತಂಡದಲ್ಲಿರುವ ನರಿಕೊಂಬು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಉಳಿದಂತೆ ಬಿಜೆಪಿ ಯುವ ಮುಖಂಡ ಸುರೇಶ ಕೋಟ್ಯಾನ್, ರಾಯಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೆಟ್ಟು, ತಿಲಕ್ ಸಜಿಪ, ರಂಜಿತ್ ಮಾಣಿಮಜಲು, ತಿಲಕ್ ರಾಜ್ ನರಿಕೊಂಬು, ಅಶ್ವಿನ್ ಭಟ್, ಸಂತೋಷ್ ನರಿಕೊಂಬು, ಪ್ರದೀಪ್ ನರಿಕೊಂಬು, ನಿಖಿಲ್ ಕಳ್ಳಿಗೆ, ಶೇಖರ್ ಕಳ್ಳಿಗೆ, ಶುಭಂ ಮಂಗಳೂರು, ಪ್ರದೀಪ್ ಗೌಡ ರಾಯಿ, ವಿಘ್ನೇಶ್ ರಾಯಿ, ಮನೋಜ್, ನವೀನ್, ರಾಜೇಶ್ ರಾಯಿ ಮತ್ತಿತರರು ತಂಡದಲ್ಲಿ ಇದ್ದಾರೆ.
