ಪಂಜಿಕಲ್ಲು: ಗುಡ್ಡದ ಕುಸಿದು ಮೂವರ ಸಾವು ಪ್ರಕರಣ ಗ್ರಾ.ಪಂ.ವಿರುದ್ಧ ಅನಗತ್ಯ ಆರೋಪ: ಅಧ್ಯಕ್ಷರ ಸ್ಪಷ್ಟನೆ
ಬಂಟ್ವಾಳ: ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಕೇರಳದ ನಾಲ್ವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಪೈಕಿ ಮೂವರು ಸಾವನ್ನಪ್ಪಿ ಒಬ್ಬರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಒಡತಿ ಶಿಕ್ಷಕಿ ಬೆನಡಿಕ್ಟ್ ಕಾರ್ಲೊ ಸಹಿತ ಕೆಲವೊಂದು ಸ್ಥಳೀಯ ಪ್ರಚಾರಪ್ರಿಯ ರಾಜಕಾರಣಿಗಳು ಗ್ರಾಮ ಪಂಚಾಯಿತಿ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು ಟೀಕಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಟ್ಟು ೧೨ ಎಕರೆ ಜಮೀನು ಹೊಂದಿರುವ ಹೆನ್ರಿ ಕಾರ್ಲೊ ಅವರ ಪುತ್ರಿ ಬೆನಡಿಕ್ಟ್ ಕಾರ್ಲೊ ಮನೆ ಅಂಗಳಕ್ಕೆ ಜು.೫ರಂದು ಕೂಡಾ ಭೂ ಕುಸಿತದಿಂದ ಅಡಿಕೆ ಒಳಗಿಸುವ ಸೋಲಾರ್ ಮಾಡು ಹಾನಿಗೀಡಾಗಿತ್ತು. ಮರುದಿನ ಸಂಜೆ ಸುಮಾರು ೬.೪೫ ಗಂಟೆಗೆ ಮತ್ತೆ ಭೂ ಕುಸಿತ ಉಂಟಾಗಿದ್ದರೂ ಪಂಚಾಯಿತಿಗೆ ಯಾರೂ ಮಾಹಿತಿ ನೀಡಿಲ್ಲ. ಅಂದು ರಾತ್ರಿ ೭ಗಂಟೆಗೆ ಗ್ರಾಮಾಂತರ ಠಾಣೆ ಎಸೈ ಹರೀಶ್ ಕರೆ ಮಾಡಿ ವಿಷಯ ತಿಳಿಸಿದ ಕೂಡಲೇ ಜೆಸಿಬಿಯೊಂದಿಗೆ ತೆರಳಿ ರಾತ್ರಿ ಸುಮಾರು ೧೨ ಗಂಟೆ ತನಕ ನಾವೆಲ್ಲರೂ ಮಣ್ಣು ತೆರವುಗೊಳಿಸಲು ಶ್ರಮಿಸಿದ್ದೇವೆ. ಆದರೆ ಸ್ಥಳೀಯ ಕೆಲವೊಂದು ಪ್ರಚಾರಪ್ರಿಯ ರಾಜಕಾರಣಿಗಳು ಕೈಗೆ ಕೆಸರು ಮೆತ್ತಿಕೊಂಡು ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪಂಚಾಯಿತಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಅವರು ಟೀಕಿಸಿದರು.
ಜು.೫ರಂದು ಘಟನಾ ಸ್ಥಳಕ್ಕೆ ತೆರಳಿದ ಗ್ರಾಮಕರಣಿಕರು ನೀಡಿದ್ದ ಮುನ್ನೆಚ್ಚರಿಕೆ ನಿರ್ಲಕ್ಷಿಸಿದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕದ ನಂಬರ್ ಪಡೆಯದೆ ಅಕ್ರಮವಾಗಿ ಹೆಂಚಿನ ಶೆಡ್ ನಲ್ಲಿ ಕಾರ್ಮಿಕರಿಗೆ ವಸತಿ ನೀಡಬಾರದು ಎಂಬುದು ಶಿಕ್ಷಕಿಗೆ ತಿಳಿದಿಲ್ಲವೇ …? ಎಂದು ಅವರು ಪ್ರಶ್ನಿಸಿದರು. ಇದೀಗ ಮತ್ತೆ ಕುಸಿತದ ಭೀತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮನೆಯವರನ್ನು ಸ್ಥಳಾಂತರಿಸಲಾಗಿದ್ದರೂ ಮಾಜಿ ಸಚಿವರ ನೇತೃತ್ವದ ತಂಡ ಭೇಟಿ ಘಟನಾ ಸ್ಥಳಕ್ಕೆ ಅವರನ್ನು ಮತ್ತೆ ಕರೆಸಿಕೊಂಡಿರುವುದು ತಪ್ಪು ಎಂದರು.
೫೦ ಮಂದಿ ತುರ್ತು ಸೇವಾ ತಂಡ ರಚನೆ: ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೫೦ ಮಂದಿ ಸದಸ್ಯರ ‘ತುರ್ತು ಸೇವಾ ತಂಡ’ ರಚಿಸಲಾಗಿದ್ದು, ಈಗಾಗಲೇ ಗ್ರಾಮದಲ್ಲೆಡೆ ಸಂಚರಿಸಿ ಮುಂಜಾಗ್ರತಾ ಕ್ರಮವಾಗಿ ೧೧ ಮನೆಗಳ ಸದಸ್ಯರನ್ನು ಸ್ಥಳಾಂತರಗೊಳಿಸಿರುವುದಾಗಿ ತಿಳಿಸಿದರು.
ಇಲ್ಲಿನ ಪುಂಚೋಡಿ ಎಂಬಲ್ಲಿ ಕಳೆದ ೨೦೧೧ರಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ೧೦ ಸೆಂಟ್ಸ್ ಸರ್ಕಾರಿ ಜಮೀನಿಗೆ ನಿರ್ಮಿಸಿದ್ದ ಆವರಣ ಗೋಡೆ ಕೆಡವಿ ಸ್ಥಳೀಯ ನಿವಾಸಿ ಅನಿಲ್ ಹೆಗ್ಡೆ ಗೇಟು ಅಳವಡಿಸಿರುವುದನ್ನು ಪಂಚಾಯಿತಿ ವತಿಯಿಂದಲೇ ತೆರವುಗೊಳಿಸಿ ಬೀಗ ಜಡಿಯಲಾಗಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಹರಡಿದ ವಾಮದಪದವು ನಿವಾಸಿ ಪದ್ಮನಾಭ ಸಾವಂತ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷಿö್ಮÃನಾರಾಯಣ ಗೌಡ, ಪೂವಪ್ಪ ಮೆಂಡನ್, ಬಾಲಕೃಷ್ಣ ಪೂಜಾರಿ, ಮೋಹನದಾಸ ನೂಜಂತೋಡಿ, ಗೋಪಾಲ ಇದ್ದರು.