ಪಂಜಿಕಲ್ಲು: ಗುಡ್ಡ ಕುಸಿತ ಪ್ರಕರಣ ನಾಲ್ವರಲ್ಲಿ ಬದುಕಿದ್ದು ಒಬ್ಬರು ಮಾತ್ರ ಮನೆ ಮಾಲೀಕರ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಗುಡ್ಡ ಕುಸಿತದಿಂದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಮನೆ ಮಾಲೀಕರ ಮಾರುತಿ ಕಾರು ಮಣ್ಣಿನಡಿ ಸಿಲುಕಿ ನುಜ್ಜುಗುಜ್ಜಾಗಿದೆ.
ಇಲ್ಲಿನ ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಹೆಂಚಿನ ಶೆಡ್ ನಲ್ಲಿ ವಾಸವಾಗಿದ್ದ ನಾಲ್ವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಪೈಕಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಮನೆ ಮಾಲೀಕರ ವಿರುದ್ಧ ನಿರ್ಲಕ್ಷö್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ನಿವಾಸಿ ಬೆನಡಿಕ್ಟ್ ಕಾರ್ಲೊ ಎಂಬವರ ಮನೆಯಲ್ಲಿ ಇದೇ ೫ರಂದು ಸಂಜೆ ೫೦ ಅಡಿ ಎತ್ತರದ ಗುಡ್ಡ ಕುಸಿದು ಅಡಿಕೆ ಒಣಗಿಸುವ ಸೋಲಾರ್ ಶೆಡ್ ಹಾನಿಗೀಡಾಗಿತ್ತು. ಈ ಬಗ್ಗೆ ಗ್ರಾಮಕರಣಿಕ ಕುಮಾರ್ ಅಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಪಕ್ಕದಲ್ಲೇ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ವಾಸವಾಗಿದ್ದ ಹೆಂಚಿನ ಹಳೆ ಮನೆಯಿಂದ ಅವರನ್ನು ತೆರವುಗೊಳಿಸಲು ಸೂಚಿಸಿದ್ದರು. ಆದರೆ ಬುಧವಾರ ಸಂಜೆ ಮತ್ತೆ ಗುಡ್ಡ ಕುಸಿದು ಅದೇ ಹಳೆ ಮನೆ ಮೇಲೆ ಬಿದ್ದು ಮೂವರು ಸಾವನ್ನಪ್ಪಿದ್ದು, ಒಬ್ಬರು ಮಾತ್ರ ಬದುಕಿ ಉಳಿದಿದ್ದಾರೆ. ಇದೇ ವೇಳೆ ಒಳಗಿದ್ದ ಕಾರ್ಮಿಕರ ಗುತ್ತಿಗೆದಾರ ಅಖಿಲ್ ಬೊಬ್ಬೆ ಹಾಕುತ್ತಾ ಹೊರಗೆ ಓಡಿ ಬಂದಿದ್ದು, ಮನೆ ಮಾಲೀಕರ ಮಾರುತಿ ಕಾರೊಂದು ಮಣ್ಣಿನಡಿ ಸಿಲುಕಿ ನುಜ್ಜುಗುಜ್ಜಾಗಿದೆ. ಈ ಕಾರ್ಮಿಕರ ಸುರಕ್ಷತೆ ಬಗ್ಗೆ ನಿರ್ಲಕ್ಷö್ಯ ವಹಿಸಿದ್ದ ಮನೆ ಒಡತಿ ಬೆನಡಿಕ್ಟ್ ಕಾರ್ಲೊ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೂವರು ಕಾರ್ಮಿಕರ ಸಾವು:
ಮೃತರನ್ನು ಬಿಜು ಪಾಲಕ್ಕಾಡ್ (೪೫), ಸಂತೋಷ್ ಅಲಪುಝ(೪೬) ಮತ್ತು ಬಾಬು ಕೊಟ್ಟಯಂ( ೪೪) ಎಂದು ಗುರುತಿಸಲಾಗಿದ್ದು, ಉಳಿದಂತೆ ಜಾನಿ ಕಣ್ಣೂರು (೪೪) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.