ಸಜಿಪಪಡು: ಯುವಕ ನೀರುಪಾಲು ಪ್ರಕರಣ ಉಳ್ಳಾಲ ಕೋಟೆಪುರದಲ್ಲಿ ಶವ ಪತ್ತೆ
ಬಂಟ್ವಾಳ: ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ಸಂಬಂಧಿ ಯುವಕರೊಂದಿಗೆ ಭಾನುವಾರ ಸಂಜೆ ಸ್ನಾನಕ್ಕೆ ತೆರಳಿದ್ದ ವೇಳೆ ನೀರುಪಾಲಾಗಿದ್ದ ಸ್ಥಳೀಯ ನಿವಾಸಿ ರತ್ನಾಕರ ಯಾನೆ ರುಕ್ಮಯ ಸಪಲ್ಯ ಇವರ ಪುತ್ರ ಅಶ್ವಿತ್ ಗಾಣಿಗ(೧೯) ಇವರ ಮೃತದೇಹ ಉಳ್ಳಾಲ ಸಮೀಪದ ಕೋಟೆಪುರ ಕೋಡಿ ಎಂಬಲ್ಲಿ ಬುಧವಾರ ಪತ್ತೆಯಾಗಿದೆ. ಕಳೆದ ಮೂರು ದಿನಗಳಿಂದ ಪೊಲೀಸರು ಮತ್ತು ಅಗ್ನಿಶಾಮಕದಳ ಸ್ಥಳೀಯರ ಸಹಕಾರದಲ್ಲಿ ಹುಡುಕಾಟ ಮುಂದುವರಿಸಿದ್ದು, ಬುಧವಾರ ಬೆಳಿಗ್ಗೆ ಸಮುದ್ರ ಸಮೀಪದಲ್ಲೇ ಇರುವ ಕೋಟೆಪುರ ಕೋಡಿ ಎಂಬಲ್ಲಿ ಬಂಡೆಗೆ ಸಿಲುಕಿಕೊಂಡಿತ್ತು. ಮೃತದೇಹ ದಪ್ಪವಾಗಿ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದು, ಅಂತ್ಯಕ್ರಿಯೆ ಮನೆ ಸಮೀಪದಲ್ಲೇ ಬುಧವಾರ ಸಂಜೆ ನೆರವೇರಿದಾಗ ಅಪಾರ ಮಂದಿ ಸ್ಥಳೀಯರು ಜಮಾಯಿಸಿದ್ದರು. ಮೃತರಿಗೆ ತಂದೆ, ತಾಯಿ ಮತ್ತು ಸಹೋದರ ಇದ್ದಾರೆ.
ಜು.03ರಂದು ಭಾನುವಾರ ಮಧ್ಯಾಹ್ನ ಮೃತನ ಚಿಕ್ಕಪ್ಪ ನಾಗೇಶ ಗಾಣಿಗ ಎಂಬವರ ಮನೆಯಲ್ಲಿ ಮಗುವಿನ ತೊಟ್ಟಿಲು ತೂಗುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ನಾಲ್ವರು ಸಂಬಂಧಿ ಯುವಕರೊಂದಿಗೆ ನದಿಗೆ ತೆರಳಿದ್ದರು.
ಇನ್ನೊಂದೆಡೆ ಅಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಹರ್ಷಿತ್ ಗಾಣಿಗ ಅಪಾಯದಿಂದ ಪಾರಾಗಿದ್ದು, ನ್ಯುಮೋನಿಯಾ ಜ್ವರದಿಂದ ಬಳಲುತ್ತಿರುವುದಾಗಿ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.