ಬಂಟ್ವಾಳ ಪುರಸಭೆ: ವಿಶೇಷ ಸಭೆ ರೂ ೬೪ ಕೋಟಿ ವೆಚ್ಚದ ಎರಡನೇ ಹಂತದ ಕಾಮಗಾರಿಗೆ ಮೊದಲು ಪರಿಶೀಲನೆಗೆ ನಿರ್ಧಾರ
ಬಂಟ್ವಾಳ: ಪುರಸಭೆಯಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಇಂಜಿನಿಯರ್ ಶೋಭಲಕ್ಷ್ಮಿ ಮಾತನಾಡಿದರು. ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಇದ್ದಾರೆ.
ಪುರಸಭಾ ವ್ಯಾಪ್ತಿಯಲ್ಲಿ ರೂ ೬೪ ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಒಳಚರಂಡಿ ಕಾಮಗಾರಿ ಆರಂಭಗೊಳಿಸುವ ಮೊದಲು ಮೊದಲನೇ ಹಂತದ ಕಾಮಗಾರಿ ಸಂಪೂರ್ಣ ಪರಿಶೀಲನೆ ನಡೆಸಬೇಕು ಎಂದು ಬುಧವಾರ ನಡೆದ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಹಿಂದೆ ನಡೆದ ಒಳಚರಂಡಿ ಕಾಮಗಾರಿ ಸುವ್ಯವಸ್ಥಿತವಾಗಿ ನಡೆದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡರು.
ಬಿಜೆಪಿ ಸದಸ್ಯರ ಗೈರು: ಈ ವಿಶೇಷ ಸಭೆಗೆ ಬಿಜೆಪಿ ಎಲ್ಲಾ ಸದಸ್ಯರೂ ಗೈರು ಹಾಜರಾಗಿದ್ದರು. ಈ ಬಗ್ಗೆ ಬಿಜೆಪಿ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಪತ್ರ ಬರೆದು ನಮಗೆ ಮೂರು ದಿನಕ್ಕೆ ಮೊದಲು ಸಭೆಯ ನೋಟೀಸು ಬಂದಿಲ್ಲ ಎಂದು ಪತ್ರ ಬರೆದಿರುವುದಾಗಿ ಅಧ್ಯಕ್ಷರು ಸಭೆಗೆ ತಿಳಿಸಿದರು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಇಂಜಿನಿಯರ್ ಶೋಭಲಕ್ಷ್ಮಿ ಅವರನ್ನು ತೀವ್ರ ತರಾಟೆ ತೆಗೆದುಕೊಂಡ ಸದಸ್ಯರು, ನೀರು ಸರಬರಾಜಿನಲ್ಲಿ ಉಂಟಾದ ಲೋಪ ದೋಷಗಳ ಬಗ್ಗೆ ಗಮನ ಸೆಳೆದರು.
ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮಾಜಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಸದಸ್ಯರಾದ ವಾಸು ಪೂಜಾರಿ, ಸಿದ್ದಿಕ್ ಗುಡ್ಡೆಯಂಗಡಿ, ಇದ್ರೀಸ್, ಹಸೈನಾರ್, ಗಂಗಾಧರ ಪೂಜಾರಿ, ಲೋಲಾಕ್ಷ ಶೆಟ್ಟಿ, ಮುನೀಶ್ ಆಲಿ, ಗಾಯತ್ರಿ ಪ್ರಕಾಶ್, ಝೀನತ್ ಫಿರೋಜ್ ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಇದ್ದರು.