ಮುಂಬಯಿ: ವಾಸ್ತವ್ಯದ ಮನೆಯಲ್ಲಿ ಮಂದಿರ ರೂಪಿಸಿದಾಗ ಮನಸ್ಸುಗಳು ಭಕ್ತಿದಾಯಕವಾಗು ವುದು. ಇಂತಹ ಭಕ್ತಿಭಾವದಿಂದಲೇ ಸಂಸ್ಕಾರಯುತ ಸಂಸಾರ ಸಾಧ್ಯವಾಗುವುದು. ಮನೆಯಲ್ಲಿ ಮೂಡಿದ ಆಧ್ಯಾತ್ಮಿಕತೆಯಿಂದ ಶುದ್ಧವಾದ, ನಿಷ್ಕಲ್ಮಶ ಭಕ್ತಿ ಜಗದೊಡೆಯ ಶ್ರೀಕೃಷ್ಣನ ಶ್ರೀರಕ್ಷೆಗೂ ಸಮೀಪ್ಯವುಳ್ಳದ್ದು. ಆದ್ದರಿಂದ ಮನೆ, ಮನಗಳನ್ನು ಮಂದಿರವಾಗಿಸಿ ಬಾಳಿದಾಗ ಬದುಕು ಬಂಗಾರವಾಗುವುದು. ಇದಕ್ಕೆ ಬಿ.ಆರ್ ಶೆಟ್ಟಿ ಪರಿವಾರವೇ ನಿದರ್ಶನ. ಭಕ್ತಿ ಮೂಲಕ ದುಷ್ಟಶಕ್ತಿಗಳು ದೂರಗೊಂಡು ನೆಮ್ಮದಿಯುತ, ಸಮೃದ್ಧಿಯ ಬಾಳು ಫಲಿಸುವುದು ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ (ಉಡುಪಿ ಶ್ರೀ ಪುತ್ತಿಗೆ ಮಠ) ಇದರ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನುಡಿದರು

ಉಡುಪಿ ವಳಕಾಡು ಅಲ್ಲಿನ ‘ಶ್ರೀ ಗುರುಛಾಯಾ’ ಮೂಲತಃ ಬೃಹನ್ಮುಂಬಯಿಯಲ್ಲಿನ ಪ್ರತಿಷ್ಠಿತ ಉದ್ಯಮಿ ಬಿ.ಆರ್ ಶೆಟ್ಟಿ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಅವರ ಗೋರೆಗಾಂನ ಕಲ್ಪತರು ಪಿನ್ನಾಕಲ್ ನಿವಾಸದಲ್ಲಿ ವಾರ್ಷಿಕ ಗಣಪತಿ ಉತ್ಸವ ಸಂಭ್ರಮೋಲ್ಲಾಸದಿಂದ ಆಚರಿಸಲಾಗುತ್ತಿದ್ದು ಈ ಶುಭಾವಸರದಿ ಇಂದಿಲ್ಲಿ ಪುತ್ತಿಗೆಶ್ರೀಗಳು ಚಿತ್ತೈಸಿ ಪ್ರತಿಷ್ಠಾಪಿತ ಶ್ರೀ ಗಣಪತಿಗೆ ಪೂಜಿಸಿ ಆರತಿಗೈದರು. ಬಿ.ಆರ್ ಶೆಟ್ಟಿ, ಚಂಚಲಾ ಆರ್.ಶೆಟ್ಟಿ ದಂಪತಿ ಶ್ರೀಗಳನ್ನು ಚೆಂಡೆವಾದ್ಯದ ನೀನಾದದೊಂದಿಗೆ ಸಾಂಪ್ರದಾಯಿಕವಾಗಿ ಶೆಟ್ಟಿ ನಿವಾಸಕ್ಕೆ ಬರಮಾಡಿಕೊಂಡರು. ಅನುಗ್ರಹನುಡಿಗಳ ಬಳಿಕ ಶ್ರೀಪಾದರು ಬಿ.ಆರ್ ಶೆಟ್ಟಿ, ಚಂಚಲಾ ಆರ್.ಶೆಟ್ಟಿ, ಕು| ಹರ್ಷಿತಾ ಆರ್.ಶೆಟ್ಟಿ, ಡಾ| ಚಿರಂಜೀವ್ ಆರ್.ಶೆಟ್ಟಿ ಕುಟುಂಬಸ್ಥರಿಗೆ ಗೌರವಿಸಿ ಮಂತ್ರಾಕ್ಷೆಯನ್ನಿತ್ತು ಶುಭಹಾರೈಸಿದರು ಹಾಗೂ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.
ಶ್ರೀಪಾದರು ಆಗಮಿಸಿ ಶೆಟ್ಟಿ ನಿವಾಸದಲ್ಲಿನ ಮಂದಿರದಲ್ಲಿ ಶ್ರೀದೇವರಿಗೆ ಆರತಿ ಬೆಳಗಿಸಿದರು. ಪುತ್ತಿಗೆಶ್ರೀಗಳ ಪಾವನ ಉಪಸ್ಥಿತಿಯಿಂದ ಧಾರ್ಮಿಕ ಕಾರ್ಯಕ್ರಮವು ಮತ್ತಷ್ಟು ಮಂಗಳಮಯವಾಗಿದ್ದು ಈ ಸಂದರ್ಭದಲ್ಲಿ ವಿಶೇಷವಾಗಿ ಪುರೋಹಿತರಾದ ರತೀಶ್ ತಂತ್ರಿ, ನಾರಾಯಣ ಆಚಾರ್ಯ, ಪ್ರಕಾಶ್ ಆಚಾರ್ಯ ರಾಮಕುಂಜ, ಸಿಎ| ಸುಧೀರ್ ಆರ್.ಎಲ್ ಶೆಟ್ಟಿ, ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ಪಡುಬಿದ್ರಿ ವಿ.ರಾಜೇಶ್ ರಾವ್, ಬಿ.ಎಂ ಶೆಟ್ಟಿ (ವಳಕಾಡು), ವೆಂಕಟೇಶ್ ಶೆಟ್ಟಿ (ವಳಕಾಡು), ಅನೂಪ್ ಶೆಟ್ಟಿ, ಅಶೋಕ ಪಕ್ಕಳ ಪೆರ್ಮಂಕಿಗುತ್ತು ಸೇರಿದಂತೆ ಗಣ್ಯರನೇಕರು ಆಗಮಿಸಿ ಶುಭಕೋರಿದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್
