ಬಂಟ್ವಾಳ: ವಗ್ಗ ರಾಷ್ಟ್ರೀಯ ಹೆದ್ದಾರಿ ನಡುವಿನ ಪೊಯ್ಲೋಡಿ ಎಂಬಲ್ಲಿ ಹೊಸ ತಡೆಗೋಡೆ ಸಹಿತ ಗುಡ್ಡ ಕುಸಿತದಿಂದ ಮಣ್ಣು ಕುಸಿಯುತ್ತಿದ್ದು, ಹೆದ್ದಾರಿಯಲ್ಲಿ ಎಚ್ಚರಿಕೆ ಫಲಕ ಅಳವಡಿಸಲಾಗಿದೆ.
ಬಂಟ್ವಾಳ ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ನೇತ್ರಾವತಿ ನದಿಯಲ್ಲಿ ಎಡರು ದಿನಗಳಿಂದ ನೀರಿನ ಮಟ್ಟ ೭.೫ಮೀಟರ್ ಏರಿಕೆ ಕಾಯ್ದುಕೊಂಡಿದೆ. ಇಲ್ಲಿನ ಪುರಸಭಾ ವ್ಯಾಪ್ತಿಯ ಲೊರೆಟ್ಟೋ- ಪೊಣ್ಣಂಗಿಲ ರಸ್ತೆಯಲ್ಲಿ ರಸ್ತೆ ಬದಿ ಬುಧವಾರ ಮಣ್ಣು ಕುಸಿದು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಇಲ್ಲಿನ ನಿವಾಸಿ ಮೀನಾಕ್ಷಿ ಎಂಬವರ ಮನೆ ಅಪಾಯದ ಅಂಚಿನಲ್ಲಿದೆ. ಸ್ಥಳೀಯ ಇಜ್ಜಾ ನಿವಾಸಿ ಜುಲಿಯಾನ ಸಿಕ್ವೇರಾ ಮನೆಯ ಅವರಣಗೋಡೆ ಕುಸಿದು ಬಿದ್ದು ಹಾನಿಯಾಗಿದ್ದು, ಮಾಣಿ ಗ್ರಾಮದ ಅಶ್ವಥದಡಿ ಮೀನಾಕ್ಷಿ ಎಂಬವರ ಮನೆ ಮೇಲೆ ಅವರಣಗೋಡೆ ಕುಸಿದು ಬಿದ್ದು ಹಾನಿಯಾಗಿದೆ.
ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ಗುಡ್ಡ ಕುಸಿದು ಕುಡ್ತಮುಗೇರು-ಕುಳಾಲು ಸಂಚಾರಕ್ಕೆ ಅಡಚಣೆಯಾಗಿದೆ. ಬೊಲ್ಪಾದೆ ನವಗ್ರಾಮ ನಿವಾಸಿ ಸುಶೀಲಾ ಇವರ ಮನೆ ಮೇಲೆ ರಕ್ಷಿತಾರಂಣ್ಯದ ಮರದ ಗೆಲ್ಲು ಮುರಿದು ಬಿದ್ದು ಹಾನಿಯಾಗಿದೆ. ಸೆರ್ಕಳ ನಿವಾಸಿ ಸಂಕಪ್ಪ ಸಪಲ್ಯ ಇವರ ಮನೆ ಮೇಲೆ ಮರ ಉರುಳಿ ಬಿದ್ದು ಹಾನಿಯಾಗಿದೆ.
ಇಲ್ಲಿನ ಬಿ.ಸಿ.ರೋಡು – ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಪೊಯ್ಲೋಡಿ, ವಗ್ಗ ಬಡಗುಂಡಿ ಎಂಬಲ್ಲಿ ಹೊಸ ತಡೆಗೋಡೆ ಸಹಿತ ರಸ್ತೆ ಬದಿ ಗುಡ್ಡ ಮತ್ತೆ ಕುಸಿಯುತ್ತಿದ್ದು, ವಾಹನ ಸವಾರರು ಆತಂಕ ಎದುರಿಸುತ್ತಿದ್ದಾರೆ.
