ಬಂಟ್ವಾಳ: ಅಕ್ರಮ ಗಣಿಗಾರಿಕೆ, ಮರಳು, ಜುಗಾರಿ ದಂಧೆ ಎಎಸ್ಪಿ ಶಿವಾಂಶು ರಜಪೂತ್ ವರ್ಗಾವಣೆ ಸಾಕ್ಷಿ: ಮಾಜಿ ಸಚಿವ ರೈ ಆರೋಪ
ಬಂಟ್ವಾಳ: ಮತ್ತು ಬೆಳ್ತಂಗಡಿ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸಹಿತ ಮರಳು ಮತ್ತು ಜುಗಾರಿ ದಂಧೆ ವ್ಯಾಪಕವಾಗಿದ್ದು, ಇದನ್ನು ತಡೆಯಲು ಯತ್ನಿಸಿದ್ದ ಎಎಸ್ಪಿ ಶಿವಾಂಶು ರಜಪೂತ್ ಇವರನ್ನು ರಾಜಕೀಯ ಪ್ರೇರಿತವಾಗಿ ಬೀದರ್ ಜಿಲ್ಲೆಯ ಹುಮ್ನಾಬಾದ್ ಗೆ ವರ್ಗಾವಣೆಗೊಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.
ಬಿ.ಸಿ.ರೋಡು ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಗಾಗಲೇ ಜುಗಾರಿ ಅಡ್ಡೆ ಮತ್ತು ಕ್ಲಬ್ ಹಾವಳಿ ಪರಿಣಾಮದಿಂದ ಪಾದಚಾರಿ ಮಹಿಳೆಯರ ಕರಿಮಣಿ ಎಗರಿಸುವ ಪ್ರಕರಣ ಹೆಚ್ಚಳವಾಗಿದ್ದು, ಕ್ಲಬ್ ಪಕ್ಕದಲ್ಲೇ ಯುವಕನೊಬ್ಬನಿಗೆ ಚಾಕು ಇರಿತ ಪ್ರಕರಣವೂ ನಡೆದಿದೆ ಎಂದರು. ಇಲ್ಲಿನ ಕಡೇಶಿವಾಲಯ ನೇತ್ರಾವತಿ ನದಿಯಿಂದ ಮರಳು ತೆಗೆಯಲು ಪರವಾನಿಗೆ ಪಡೆದು ಸ್ಥಳೀಯ ಮಣಿನಾಲ್ಕೂರು, ಸಾಲೆತ್ತೂರು, ಪೆರ್ನೆ, ಸೇರಾ ಮತ್ತಿತರ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಈಚೆಗಷ್ಟೇ ನಾವು ನಡೆಸಿದ ಪ್ರತಿಭಟನೆ ಬಳಿಕ ಮತ್ತೆ ಅಕ್ರಮ ಗಣಿಗಾರಿಕೆ ಮತ್ತು ಮರಳುಗಾರಿಕೆ ಎಗ್ಗಿಲ್ಲದೆ ನಡೆಯಲು ಇಬ್ಬರು ಶಾಸಕರು ಸ್ವತಃ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಅಬ್ಬಾಸ್ ಆಲಿ, ಕೆ.ಪದ್ಮನಾಭ ರೈ, ಸುಭಾಶ್ಚಂದ್ರ ಶೆಟ್ಟಿ, ಉಮಾನಾಥ ಶೆಟ್ಟಿ, ಮುರಳೀಧರ ರೈ, ಮಹಮ್ಮದ್ ಬಡಗಬೆಳ್ಳೂರು, ಕೌಶಲ್ ಶೆಟ್ಟಿ ಮತ್ತಿತರರು ಇದ್ದರು.