ಬಂಟ್ವಾಳ: ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಮಾವೇಶ ಕಾಂಗ್ರೆಸ್ ಕೊಡುಗೆ ಸ್ಮರಿಸಿದರೆ ಸ್ಪಷ್ಟ ಬಹುಮತ: ಮಧು ಬಂಗಾರಪ್ಪ
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಮಾವೇಶದಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ಚಿತ್ರನಟ ಮಧು ಬಂಗಾರಪ್ಪ ಮಾತನಾಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ಇದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಿಜೆಪಿಗೆ ಸೇರ್ಪಡೆಗೊಂಡು ಕೇವಲ ೯ ತಿಂಗಳಲ್ಲೇ ಮರಳಿ ಬರುವ ಮೂಲಕ ಬಿಜೆಪಿ ದೇಶಕ್ಕೆ ಒಳ್ಳೆಯ ಪಕ್ಷವಲ್ಲ ಎಂದು ಸಾಬೀತು ಪಡಿಸಿದ್ದಾರೆ. ರಾಜ್ಯದಲ್ಲಿ ಹಿಂದುಳಿದ ವರ್ಗದ ಜನತೆಗೆ ಭೂ ಮಸೂದೆ ಕಾಯ್ದೆ ಮಾತ್ರವಲ್ಲದೆ ಶೈಕ್ಷಣಿಕ ಮತ್ತು ರಾಜಕೀಯ ಮೀಸಲಾತಿ ಜೊತೆಗೆ ಉಚಿತ ಪಡಿತರ ಹಾಗೂ ರೈತರಿಗೆ ಉಚಿತ ವಿದ್ಯುತ್ ನೀಡಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಈ ಕೊಡುಗೆ ಸ್ಮರಿಸಿ ಜನತೆ ಮತ ಚಲಾಯಿಸಿದರೆ ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಚಿತ್ರನಟ ಮಧು ಬಂಗಾರಪ್ಪ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ವತಿಯಿಂದ ಸೋಮವಾರ ಸಂಜೆ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ, ಮಂಗಳೂರು ವಿವಿಯಲ್ಲಿ ಗುರು ಪೀಠ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಅರಣ್ಯ ಭೂಮಿಯಲ್ಲಿ ಜಮೀನು ಮಂಜೂರುಗೊಳಿಸಿದ ರೈತರಿಗೆ ಬಿಜೆಪಿ ಸರ್ಕಾರ ನೋಟೀಸು ನೀಡುತ್ತಿದೆ. ನಾನು ನೈಜ ರಾಮಭಕ್ತನಾಗಿದ್ದು, ವಿದ್ಯಾರ್ಥಿಗಳ ಪಠ್ಯ ಕೇಸರೀಕರಣಗೊಳಿಸಿದ ಬಿಜೆಪಿಗರು ನಿಜವಾದ ಭಯೋತ್ಪಾದಕರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಪ್ರಾಸ್ತಾವಿಕ ಮಾತನಾಡಿ, ಕಾಂಗ್ರೆಸ್ ಬಲಿಷ್ಠ ಜಾತ್ಯಾತೀತ ಪಕ್ಷವಾಗಿದ್ದು, ಕಾಂಗ್ರೆಸ್ ನಿಂದ ಅತೀ ಹೆಚ್ಚು ಲಾಭವಾಗಿದ್ದರೆ ಅದು ಹಿಂದುಳಿದ ವರ್ಗಕ್ಕೆ ಎಂದರು. ಮಾಜಿ ಪ್ರಧಾನಿ ಇಂದಿರಾಗಾAಧಿ ಅವರ ೨೦ ಅಂಶ ಕಾರ್ಯಕ್ರಮದಿಂದ ದುರ್ಬಲ ವರ್ಗಕ್ಕೆ ಶಕ್ತಿ ತುಂಬಿದ್ದಾರೆ. ದಿವಂಗತ ದೇವರಾಜ ಅರಸು, ಧರ್ಮಸಿಂಗ್, ಎಂ.ವೀರಪ್ಪ ಮೊಯಿಲಿ ಸಹಿತ ಹಲವು ಮಂದಿ ಹಿಂದುಳಿದ ವರ್ಗದವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿದ್ದರೆ, ಬಿಜೆಪಿ ಮಾತ್ರ ಕೇವಲ ಒಕ್ಕಲಿಗ, ಲಿಂಗಾಯಿತರನ್ನು ಮಾತ್ರ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಹಿಂದುಳಿದ ವರ್ಗಕ್ಕೆ ವಂಚಿಸಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಯುವ ಮುಖಂಡ ರಕ್ಷಿತ್ ಶಿವರಾಂ ಬೆಳ್ತಂಗಡಿ, ಪೃಥ್ವಿರಾಜ್ ಕುಲಾಲ್ ಗುರುಪುರ ಮತ್ತಿತರರು ಮಾತನಾಡಿದರು.
ಪ್ರಮುಖರಾದ ಪಿಯೂಸ್ ಎಲ್.ರಾಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಬಿ.ಪದ್ಮಶೇಖರ್ ಜೈನ್, ಸುದರ್ಶನ್ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ, ಕೆ. ಮಾಯಿಲಪ್ಪ ಸಾಲ್ಯಾನ್, ರಮೇಶ ಕುಲಾಲ್, ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ಮಲ್ಲಿಕಾ ಪಕಳ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮೈಸೂರಿನ ಕಾರ್ಪೋರೇಟರ್ ದೇವರಾಜ್, ಕೆ.ಪದ್ಮನಾಭ ರೈ, ಮೋಹನ್ ಗೌಡ ಕಲ್ಮಂಜ, ಗಣೇಶ್ ಪೂಜಾರಿ,ಸುಭಾಶ್ಚಂದ್ರ ಶೆಟ್ಟಿ, ಕೆ.ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ ಅಮ್ಟಾಡಿ, ಜಯಂತಿ ಪೂಜಾರಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಸುರೇಶ್ ಜೋರ, ನವಾಜ್ ಬಡಕಬೈಲು, ನಾರಾಯಣ ನಾಯ್ಕ್ ಮತ್ತಿತರರು ಇದ್ದರು.
ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ, ಜಗದೀಶ ಕೊಯಿಲ ವಂದಿಸಿದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.