ಸಜಿಪಪಡು: ನೀರುಪಾಲಾದ ಯುವಕನಿಗೆ ಮುಂದುವರಿದ ಹುಡುಕಾಟ
ಬಂಟ್ವಾಳ: ಇಲ್ಲಿನ ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ಭಾನುವಾರ ಸಂಜೆ ನಾಲ್ವರು ಸಂಬಂದಿಕ ಯುವಕರೊಂದಿಗೆ ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದ್ದ ವೇಳೆ ನೀರು ಪಾಲಾದ ರುಕ್ಮಯ ಯಾನೆ ರತ್ನಾಕರ ಸಪಲ್ಯ ಎಂಬವರ ಪುತ್ರ ಅಶ್ವಿತ್ ಗಾಣಿಗ (೧೯) ಇವರ ಮೃತದೇಹಕ್ಕೆ ಸೋಮವಾರವೂ ಹುಡುಕಾಟ ಮುಂದುವರಿದಿತ್ತು.
ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳೀಯ ಈಜುಗಾರರ ನೆರವಿನಲ್ಲಿ ಹುಡುಕಾಟ ಮುಮದುವರಿಸಿದ್ದಾರೆ. ಶಾಸಕ ಯು.ಟಿ.ಖಾದರ್ ಸೋಮವಾರ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸ್ಥಳೀಯ ನಿವಾಸಿ ನಾಗೇಶ ಗಾಣಿಗ ಎಂಬವರ ಮನೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದ ಮಗು ತೊಟ್ಟಿಲು ತೂಗುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಇವರು ಮನೆ ಸಮೀಪದ ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದ್ದರು.
ಉಳಿದ ನಾಲ್ವರನ್ನು ಸ್ಥಳೀಯರು ರಕ್ಷಿಸಿದ್ದು, ಈ ಪೈಕಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರ್ಷಿತ್ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಗ್ರಾಮಾಂತರ ಠಾಣೆ ಎಸೈ ಹರೀಶ್ ತಿಳಿಸಿದ್ದಾರೆ.