ಬಂಟ್ವಾಳ: ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆ ಕೆಲವೆಡೆ ಮಳೆ ಹಾನಿ, ತಡೆಗೋಡೆ ಕುಸಿತ
ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಸೋಮವಾರ ಸಂಜೆ ನೆರೆ ನೀರು ಏರಿಕೆ ಕಂಡು ಬಂದಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಇಲ್ಲಿನ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಸೋಮವಾರ ಬೆಳಿಗ್ಗೆ ೫.೫. ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ಸಂಜೆ ವೇಳೆಗೆ ೬.೫ ಮೀಟರಿಗೆ ಏರಿಕೆಯಾಗಿದೆ.
ಭಾರೀ ಮಳೆಯಿಂದಾಗಿ ಇಲ್ಲಿನ ಕರ್ಪೆ ಗ್ರಾಮದ ಕೊಡಮಣಿತ್ತಾಯ ದೈವಸ್ಥಾನ ಬಳಿ ನಿರ್ಮಿಸಲಾದ ಹಳೇ ತಡೆಗೋಡೆ ರಸ್ತೆಗೆ ಕುಸಿದು ಬಿದ್ದ ಪರಿಣಾಮ ಕೆಲಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಬಗ್ಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರಿಂದ ರೂ ೧೦ಲಕ್ಷ ವೆಚ್ಚದಲ್ಲಿ ನೂತನ ತಡೆಗೋಡೆ ನಿರ್ಮಿಸುವ ಭರವಸೆ ಸಿಕ್ಕಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಪ್ರಭು ತಿಳಿಸಿದ್ದಾರೆ.
ಇನ್ನೊಂದೆಡೆ ನಾವೂರು ನಿವಾಸಿ ವಿಲ್ಫೆçಡ್ ಮತ್ತು ಕೆದಿಲ ಗ್ರಾಮದ ತಾಳಿಪಡ್ಪು ನಿವಾಸಿ ಅಬ್ದುಲ್ ಮಜೀದ್ ಎಂಬವರ ಮನೆಗೂ ಮಳೆಯಿಂದ ಹಾನಿಗೀಡಾಗಿದ್ದು, ಬಿ.ಸಿ.ರೋಡು – ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ನಡುವಿನ ನಾವೂರು- ಬಡಗುಂಡಿ ಎಂಬಲ್ಲಿ ಮಳೆಗೆ ರಸ್ತೆ ಬದಿ ಗುಡ್ಡ ಕುಸಿದು ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ.