ಪೊಳಲಿ: ಶ್ರೀಕ್ಷೇತ್ರಪೊಳಲಿಯ ಜಾತ್ರೆ ಸಂದರ್ಭದಲ್ಲಿ ಸಂಪ್ರದಾಯದಂತೆ ‘ಆರಾಢ ಕರೆದು ಬಳಿಕ, ಭಗವತಿ ಸಾನ್ನಿಧ್ಯ (ದೀಪ ಸಂಕಲ್ಪ) ಶ್ರೀ ಭದ್ರಕಾಳಿ ಬಿಂಬ, ಅರಸು ದೈವಗಳ ಆಯುಧ ಹಾಗೂ ಕವರ್ ಮುಡಿಯೊಂದಿಗೆ ಪೊಳಲಿ ಕ್ಷೇತ್ರದಿಂದ ಶ್ರೀ ಕ್ಷೇತ್ರ ನಂದ್ಯಾಫಲ್ಗುಣಿ ನದಿಯಲ್ಲಿ ದೋಣಿಯ ಮೂಲಕ ಸಾಗಿಸಲಾಯಿತು.
ಪೊಳಲಿ ಶ್ರೀ ರಾಜರಾಜೇಶ ದೇವಸ್ಥಾನದ ಸಮಯದಲ್ಲಿ ಸಮಾಜದವರಿಗೆ ಒಂದು ವಿಶಿಷ್ಟ ಸೇವೆ ಸಲ್ಲಿಸುವ ಅವಕಾಶವಿದ್ದು, ಕ್ಷೇತ್ರಕ್ಕೆ ನಂದ್ಯ ಕ್ಷೇತ್ರದಿಂದ ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಅರಸು ದೈವಗಳ ಭಂಡಾರವು ಫಲ್ಗುಣಿ ನದಿಯನ್ನು ದೋಣಿ ಮೂಲಕ ದಾಟಿ ಆಗಮಿಸುವುದು ವಿಶೇಷವಾಗಿದೆ.
ಪೊಳಲಿ ಕ್ಷೇತ್ರದ ಧ್ವಜಾರೋಹಣದ ದಿನ ರಾತ್ರಿ ಶ್ರೀ ಭಗವತಿ ತೀಯಾ ಸಮಾಜ ಕೇಂದ್ರ ಸ್ಥಳವಾದ ಶ್ರೀ ನಂದ ಕ್ಷೇತ್ರದಿಂದ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿಗೆ ಬರುತ್ತದೆ. ದೋಣಿ ಮೂಲಕ ಬಂದ ಭಂಡಾರವು ಮುಂದೆ ಸೂಟೆಯ ಬೆಳಕಿನಲ್ಲಿ ನಡೆದುಕೊಂಡೇ ಸಾಗುತ್ತದೆ.
ವಿಶಿಷ್ಟ ಸಂಪ್ರದಾಯ
ನಂದ್ಯದ ಕ್ಷೇತ್ರದಿಂದ ಬಂದ ಭದ್ರಕಾಳಿಯ ಬಿಂಬವನ್ನು ಧರಿಸಿದವರು ಜಾತ್ರೆಯ ದಿನಾಂಕವನ್ನು ಪ್ರಕಟಿಸುವುದು ಕೂಡ ವಿಶಿಷ್ಟ ಸಂಪ್ರದಾಯವಾಗಿದೆ. ಮುಂದೆ ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಆರಾಢ ಕರೆದು, ಮರುದಿನ ತೀಯಾ ಸಮಾಜ ಬಾಂಧವರು ಭದ್ರಕಾಳಿಯನ್ನು ಅವಾಹಿಸಿಕೊಂಡವರನ್ನು ಸುಲಿಕ್ಕಿಪಡ್ಪು ಮಹಾಮಾಯಿ ಕಟ್ಟೆಗೆ ಕರೆದುಕೊಂಡು ಅಲ್ಲಿ ಆರಾಢ ಕರೆಸಿ, ಮತ್ತೆ ದೋಣಿಯ ಮೂಲಕ ಪಲ್ಗುಣಿ ನದಿಯನ್ನು ದಾಟಿ ನಂದ್ಯ ಕ್ಷೇತ್ರದಲ್ಲಿ ಆರಾಧ ಕರೆಯಲಾಗುತ್ತದೆ. ಬಳಿಕ ಪರಿಚಾರಕರಿಗೆ ತಮ್ಮನ ಹಾಗೂ ಗೌರವಧನವನ್ನು ನೀಡುವ ಕಾರ್ಯ ನೆರವೇರಿತು.
