ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ
ಚಿಕಾಗೋ: ಇದೇ ಮೊದಲ ಬಾರಿ ಮನುಷ್ಯನಿಗೆ ಹಂದಿ ಹೃದಯದ ಕಸಿ ಮಾಡಿದ್ದು, ಈಗ ಆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಮೆರಿಕ ವ್ಯಕ್ತಿಗೆ ಹಂದಿ ಹೃದಯವನ್ನು ಅಳವಡಿಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಪ್ರಸುತ್ತ ಈ ಚಿಕಿತ್ಸೆ ಯಶಸ್ವಿಯಾಗಿದ್ದು, ಚಿಕಿತ್ಸೆಯಾದ ಮೂರು ದಿನಗಳ ನಂತರ ರೋಗಿಯು ಚೇತರಿಸಿಕೊಂಡಿದ್ದಾರೆ. ಅವರಿಗೆ ಅಳವಡಿಸಲಾದ ಹೃದಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಸಿನ್ ತಂಡವು ನಡೆಸಿದ ಶಸ್ತ್ರಚಿಕಿತ್ಸೆಯು ಹಂದಿಯಿಂದ ಮನುಷ್ಯನಿಗೆ ಮೊದಲ ಬಾರಿಗೆ ಹೃದಯ ಕಸಿ ಮಾಡಿದ್ದು, ಯಶಸ್ವಿಯಾಗಿದೆ. ಹೊಸ ಜೀನ್ ಎಡಿಟಿಂಗ್ ಉಪಕರಣಗಳಿಂದ ಶಸ್ತ್ರ ಚಿಕಿತ್ಸೆ ಸಾಧ್ಯವಾಯಿತು.
ಮೇರಿಲ್ಯಾಂಡ್‍ನ 57 ವರ್ಷದ ಡೇವಿಡ್ ಬೆನೆಟ್‍ಗೆ, ಹೃದಯ ಕಸಿ ಮಾಡಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಾಯುವುದು ಅಥವಾ ಈ ಕಸಿ ಮಾಡಿಸಿಕೊಳ್ಳುವುದು ನನ್ನ ಕೊನೆಯ ಆಯ್ಕೆಯಾಗಿತ್ತು. ಆದರೆ ನಾನು ಬದುಕಲು ಬಯಸುತ್ತೇನೆ. ಬದುಕಲು ನನಗೆ ಇದು ಒಂದೇ ಆಯ್ಕೆಯಾಗಿತ್ತು ಎಂದು ವಿವರಿಸಿದರು.
ಹಂದಿ ಹೃದಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ರೋಗಿಗೆ ಕಸಿ ಮಾಡಿದ ಡಾ.ಬಾಟ್ರ್ಲಿ ಗ್ರಿಫಿತ್ ಈ ಕುರಿತು ಮಾತನಾಡಿದ್ದು, ಇದು ಒಂದು ಮಹತ್ವದ ಶಸ್ತ್ರಚಿಕಿತ್ಸೆಯಾಗಿದೆ. ಅಂಗಗ ದಾನ ಮಾಡುವ ಹಲವು ದಾನಿಗಳಿದ್ದರೂ, ಹೃದಯ ದಾನ ಮಾಡುವವರು ತುಂಬಾ ಕಡಿಮೆ. ಈಗ ಈ ರೀತಿಯ ಹೊಸ ಪ್ರಯೋಗದಿಂದ ಅಂಗಗಳ ಕೊರತೆಯ ಬಿಕ್ಕಟ್ಟನ್ನು ಪರಿಹರಿಸಲು ಸಹಾಯವಾಗಲಿದೆ ಎಂದು ವಿವರಿಸಿದರು.
ಈ ರೀತಿ ಪ್ರಯೋಗ ಮಾಡಬೇಕಾದರೆ ನಾವು ಜಾಗರೂಕತೆಯಿಂದ ಮುಂದುವರಿಯಬೇಕು. ಆದರೆ ಈ ಶಸ್ತ್ರಚಿಕಿತ್ಸೆ ಪ್ರಪಂಚದಲ್ಲಿ ಮೊದಲ ಬಾರಿಗೆ ಮಾಡಲಾಗಿದೆ. ಇದು ಯಶಸ್ವಿಯಾಗಿರುವುದರಿಂದ ಇನ್ನೂ ಹೊಸ ರೀತಿಯ ಪ್ರಯೋಗ ಮಾಡುವುದಕ್ಕೆ ನಾವು ಆಶಾವಾದಿಯಾಗಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.
ಹಂದಿಗಳು ಬಹಳ ಹಿಂದಿನಿಂದಲೂ ಮನುಷ್ಯನಿಗೆ ಕಸಿ ಮಾಡುವ ಮೂಲವಾಗಿದೆ. ಏಕೆಂದರೆ ಅವುಗಳ ಅಂಗಗಳು ಮನುಷ್ಯರಿಗೆ ಹೋಲುತ್ತವೆ. ಅದರಲ್ಲಿಯೂ ಮನುಷ್ಯನ ಹೃದಯ ಮತ್ತು ಹಂದಿ ಹೃದಯ ಒಂದೇ ಗಾತ್ರವನ್ನು ಹೊಂದಿರುತ್ತೆ. ಪ್ರಸ್ತುತ ಹಂದಿಗಳಿಂದ ಮಾನವರಿಗೆ ಮೂತ್ರಪಿಂಡಗಳು, ಯಕೃತ್ತು ಮತ್ತು ಶ್ವಾಸಕೋಶಗಳನ್ನು ಕಸಿ ಮಾಡಲು ಸಂಶೋಧನೆ ನಡೆಸುತ್ತಿದೆ ಎಂದು ತಿಳಿಸಿದರು.
ಹಿಂದೆಯೂ ಈ ರೀತಿ ಕೆಲವು ಪ್ರಯೋಗಗಳನ್ನು ಮಾಡಲಾಗಿದ್ದು, ಹಂದಿಯ ಸೋಂಕಿನ ಅಪಾಯದಿಂದ ಮನುಷ್ಯನಿಗೆ ಕಸಿ ಮಾಡಿದ ಹಿಂದಿನ ಪ್ರಯತ್ನಗಳು ವಿಫಲವಾಗಿತ್ತು. ಆದರೆ ಈ ಪ್ರಯೋಗದಲ್ಲಿ ದಾನಿ ಹಂದಿಯ ಹೃದಯ ಅತಿಯಾದ ಬೆಳವಣಿಗೆಯನ್ನು ತಡೆಯಲು ನಾವು ಹಂದಿ ಜೀನ್ ಅನ್ನು ತೆಗೆದಿದ್ದೇವೆ. ನಮ್ಮ ಎಲ್ಲ ಪ್ರಯತ್ನಗಳಿಗೆ ಇಂದು ಯಶಸ್ಸು ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.