ಮ್ಯಾನ್ಮಾರ್ ಸೇನಾ ದಾಳಿಗೆ ಮಕ್ಕಳು, ಮಹಿಳೆಯರು ಸೇರಿ 30 ಮಂದಿ ಬಲಿ – ಸುಟ್ಟು ಕರಕಲಾದ ದೇಹಗಳು
ಮ್ಯಾನ್ಮಾರ್: ಸಂಘರ್ಷ ಪೀಡಿತ ಕಯಾಹ್ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಅವರ ದೇಹಗಳು ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿವೆ.
ಮ್ಯಾನ್ಮಾರ್ ಸೇನಾ ನಿಯಂತ್ರಣದಲ್ಲಿದೆ. ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಹಿರಿಯರು, ಮಹಿಳೆಯರು, ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ ಎನ್ನಲಾಗಿದೆ. ಕರೆನ್ನಿ ಮಾನವ ಹಕ್ಕುಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಜನರನ್ನು ಅಮಾನವೀಯವಾಗಿ ಸುಟ್ಟು ಕೊಂದಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.
ಅಪರಿಚಿತ ಉಗ್ರರನ್ನು ಹತ್ಯೆ ಮಾಡಿದ್ದೇವೆ. ಅವರ ಬಳಿ ಶಸ್ತ್ರಾಸ್ತ್ರಗಳಿದ್ದವು. ಏಳು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ನಾವು ಹೇಳಿದರೂ ವಾಹನಗಳನ್ನು ನಿಲ್ಲಿಸಲಿಲ್ಲ. ಹೀಗಾಗಿ ಅನುಮಾನಗೊಂಡು ಗುಂಡಿನ ದಾಳಿ ನಡೆಸಲಾಯಿತು ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಮ್ಯಾನ್ಮಾರ್ ಮಿಲಿಟರಿಯು ಥಾಯ್ ಗಡಿ ಸಮೀಪದಲ್ಲಿ ಬಂಡುಕೋರರ ಗುಂಪಿನೊಂದಿಗೆ ಘರ್ಷಣೆ ನಡೆಸುತ್ತಿದೆ. ದಾಳಿ ವೇಳೆ ರಾಕೆಟ್ ಚಾಲಿತ ಗ್ರೆನೇಡ್ಗಳು ದಾರಿ ತಪ್ಪಿ ನಾಗರಿಕರ ಕೆಲವು ಮನೆಗಳನ್ನು ಹಾನಿಗೊಳಿಸಿವೆ ಎಂದು ಅಧಿಕಾರಿಗಳು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳಿಂದ ಮ್ಯಾನ್ಮಾರ್ ಗಡಿ ಭಾಗಗಳಲ್ಲಿ ಮಿಲಿಟರಿ ದಾಳಿ ವ್ಯಾಪಕವಾಗಿದೆ. ಇದರಿಂದ ಜನವಸತಿಗಳಿಗೆ ಸಮಸ್ಯೆಯಾಗುತ್ತಿದ್ದು, ಜನರು ಬೇರೆಡೆಗೆ ಸ್ಥಳಾಂತರವಾಗುತ್ತಿದ್ದಾರೆ.