ಮುಂಬಯಿ: ಮುಂಬಯಿಯಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ಪದವೀಧರ ಯಕ್ಷಗಾನ ಸಮಿತಿಯ ಕಾರ್ಯದರ್ಶಿ ಆಗಿ ಶ್ರಮಿಸಿದ ಹೊಸಬೆಟ್ಟು ಲಕ್ಷ್ಮೀನಾರಾಯಣ ರಾವ್ ಅವರು ಇದು ವರೆಗೆ ಯಕ್ಷಗಾನ ಕಲಾ ಜೀವನದಲ್ಲಿ ಪಾತ್ರವಹಿಸಿದ ಅರ್ಥ ಸಂಕಲನಗಳೊಂದಿಗೆ ರಚಿಸಿದ ‘ಯಕ್ಷಯಾನ’ ಕೃತಿಯು ಕಳೆದ ಭಾನುವಾರ ಚೆಂಬೂರು ಪಶ್ಚಿಮದ ಛೆಡ್ಡಾನಗರದಲ್ಲಿನ ಶ್ರೀ ಸುಬ್ರಹ್ಮಣ್ಯ ಮಠದ ಸಭಾಗೃಹದಲ್ಲಿ ಬಿಡುಗಡೆ ಗೊಂಡಿತು.
ಹೆಚ್.ಲಕ್ಷ್ಮೀನಾರಾಯಣ ರಾವ್ ಅಭಿಮಾನಿ ಬಳಗ ಪ್ರಕಾಶಿತ ಕೃತಿಯನ್ನು ಹಿರಿಯ ಅರ್ಥಧಾರಿ ಕೆ.ಕೆ ಶೆಟ್ಟಿ ಬಿಡುಗಡೆ ಗೊಳಿಸಿದ್ದು ನಾಡಿನ ಹೆಸರಾಂತ ಯಕ್ಷಗಾನ ಭಾಗವತ ಗಾನಲೋಲ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಇವರ ಘನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಬಿಎಸ್‌ಕೆಬಿ ಗೌರವ ಕಾರ್ಯದರ್ಶಿ ಅನಂತ ಪದ್ಮನಾಭ ಪೋತಿ, ಸಂಘಟಕ ಜಿ.ಟಿ ಆಚಾರ್ಯ ಉಪಸ್ಥಿತರಿದ್ದು ಅಪರ್ಣ ರಾವ್ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಭಾಗವತಿಕೆಯಲ್ಲಿ ಮುಂಬಯಿಯ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ‘ವಾಲಿ ಮೋಕ್ಷ’ ಪ್ರಸಂಗವಾಗಿಸಿ ಯಕ್ಷಗಾನ ತಾಳಮದ್ದಳೆ ಪ್ರಸ್ತುತ ಪಡಿಸಿದರು. ಕೆ.ಕೆ.ಶೆಟ್ಟಿ (ವಾಲಿ), ವಾಸು ಶೆಟ್ಟಿ ಮಾರ್ನಾಡು (ರಾಮ), ಪ್ರಕಾಶ್ ಪಣಿಯೂರು (ಸುಗ್ರೀವ) ಗೀತಾ ಆರ್.ಎಲ್ ಭಟ್ (ತಾರ) ಮುಮ್ಮೇಳದಲ್ಲಿ ಹಾಗೂ ಇನ್ನ ಆನಂದ ಶೆಟ್ಟಿ (ಮದ್ದಳೆ), ಕಣಂಜಾರು ಸುರೇಶ್ ಶೆಟ್ಟಿ (ಚಂಡೆ), ಹೆಚ್ ಲಕ್ಷ್ಮೀನಾರಾಯಣ ರಾವ್ (ಚಕ್ರತಾಳ) ಹಿಮ್ಮೇಳದಲ್ಲಿ ಭಾಗವಹಿಸಿದ್ದರು.
ಕು| ಸ್ಕಂದ ಸಂದೀಪ್ ರಾವ್ ಪ್ರಾರ್ಥನೆಯನ್ನಾಡಿದರು. ಅಪರ್ಣ ರಾವ್ ಸ್ವಾಗತಿಸಿದರು. ವೈ.ವಿ ಮಧುಸೂದನ್ ರಾವ್ ಕೃತಿ ಪರಿಚಯಿಸಿ ಅಭಿನಂದನಾ ಭಾಷಣಗೈದರು. ಪ್ರೇಮಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀನಾರಾಯಣ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿ ವಂದಿಸಿದರು. ಕು| ವಿಭಾ ಸಂದೀಪ್ ರಾವ್ ನೃತ್ಯ ಸಾದರ ಪಡಿಸಿದರು.
