ಸುದ್ದಿ9ಕಳೆದ 15 ವರ್ಷಗಳ ಹಿಂದೆ ತಾಲ್ಲೂಕಿನ ಮಂಚಿ-ಕೊಳ್ನಾಡು ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ‘ಬೊಲ್ಪು ಕಲಾ ತಂಡ’ದ ಕಲಾವಿದರು ಇದೀಗ ‘ಬೊಲ್ಪು ಕ್ರಿಯೇಶನ್ಸ್’ ಹೆಸರಿನಲ್ಲಿ ‘ಪಾಪದ ಪಿರಾವು’ ತುಳು ಧಾರಾವಾಹಿ ಮೂಲಕ ಹೊಸ ‘ಬೆಳಕು’ ಕಂಡುಕೊಂಡಿದ್ದಾರೆ. ಇದೇ 18ರಿಂದ ದೂರದರ್ಶನ ‘ಚಂದನ’ ವಾಹಿನಿಯಲ್ಲಿ ಪ್ರತೀ ಶನಿವಾರ ರಾತ್ರಿ ಗಂಟೆ 8ರಿಂದ ಎಂಟೂವರೆ ತನಕ ಧಾರಾವಾಹಿ ಪ್ರಸಾರಗೊಳ್ಳಲಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ, ಧಾರಾವಾಹಿ ನಿರ್ದೇಶಕ ಕೊರಗಪ್ಪ ಶಿಂಗಾರಕೋಡಿ ಅವರು ಕಳೆದ 15 ವರ್ಷಗಳ ಹಿಂದೆ ಆರಂಭಿಸಿದ ‘ಬೊಲ್ಪು ಕಲಾ ತಂಡ’ಕ್ಕೆ ಈ ಧಾರಾವಾಹಿ ಹೊಸ ‘ಬೆಳಕು’ ನೀಡಲಿದೆ ಎಂಬ ಕಾತರ ತಂಡದ ಕಲಾವಿದರಿಂದ ವ್ಯಕ್ತವಾಗಿದೆ.
‘ಪಾಪದ ಪಿರಾವು’, ‘ಬಿಲೆದಾಂತಿ ಬದ್ಕ್’, ‘ಮೋಲ್ ದಾನೆ ಇಂಚಾ’…?, ‘ಏಪಲಾ ಇಂಚನೇ’, ‘ಸತ್ಯೊದ ಬೊಲ್ಪು’, ಹೀಗೆ ಸಾಲು ಸಾಲು ಯಶಸ್ವೀ ತುಳು ನಾಟಕ ರಚನೆ ಮೂಲಕ ಬಹುಮುಖ ಪ್ರತಿಭೆ ಹೊಂದಿರುವ ಯುವ ಕಲಾವಿದ ಕೊರಗಪ್ಪ ಶಿಂಗಾರಕೋಡಿ ಇದೀಗ ಧಾರವಾಹಿ ಮೂಲಕ ಮತ್ತೆ ಜಿಲ್ಲೆಯ ಗಮನ ಸೆಳೆದಿದ್ದಾರೆ.
‘ಚಾಣಾಕ್ಯ ಪ್ರತಿಜೆ’್ಞ, ‘ನರ ಬಲಿ’, ‘ಸಾವಿತ್ರಿ’, ಮತ್ತಿತರ ಐತಿಹಾಸಿಕ ನಾಟಕಗಳನ್ನು ಕೂಡಾ ರಚಿಸಿ ಇವರು ನಿದರ್ೇಶನ ನೀಡಿದ್ದಾರೆ. ‘ತಿಮ್ಮನ ತಕರಾರು’ ಎಂಬ ಹಾಸ್ಯ ಲೇಖನ ಇವರಿಗೆ ವಿಶೇಷ ಗೌರವ ದೊರಕಿಸಿ ಕೊಟ್ಟಿದೆ.
‘ಮಾಯೊದ ಮದಿಪು’ ಇವರು ರಚಿಸಿದ ಸಾಂಪ್ರಾದಾಯಿಕ ಮತ್ತು ಜಾನಪದ ಶೈಲಿಯ ವೈಶಿಷ್ಟ್ಯಪೂರ್ಣ ಯಕ್ಷಗಾನ. ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು 15ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಕಂಡು ಜನಮೆಚ್ಚಿಗೆ ಪಡೆದ ಯಕ್ಷಗಾನವು ಹಲವು ವರ್ಷಗಳಿಂದ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರಗೊಂಡಿದೆ. ಕಳೆದ 2005ರಲ್ಲಿ ಇವರ ಸಂಪಾದಕೀಯದಲ್ಲಿ ‘ಬೆಳಕು’ ವೈಚಾರಿಕ ಲೇಖನ, 2012ರಲ್ಲಿ ‘ತಂಕರೆ’ ತುಳು ಕಥಾಸಂಕಲನ ಬಿಡುಗಡೆಗೊಂಡಿದೆ.
ಕಳೆದ 20 ವರ್ಷಗಳಿಂದ ಜಿಲ್ಲೆಯಲ್ಲಿ ಎಲೆಮರೆಯ ಕಾಯಿಯಂತೆ ಕನ್ನಡ, ತುಳು ಸಾಹಿತ್ಯ, ಸಾಂಸ್ಕೃತಿಕ ಮತ್ತು ಜಾನಪದ ಕ್ಷೇತ್ರದಲ್ಲಿ ಅಪಾರ ಕೃಷಿ ಮಾಡಿದ್ದಾರೆ.
ಕಳೆದ 15 ವರ್ಷಗಳಿಂದ ಯಕ್ಷಗಾನ ಸಹಿತ ತುಳುನಾಡಿನ ಜಾನಪದ ಕಲಾ ಪ್ರಕಾರಗಳಾಗಿರುವ ಕಂಗೀಲು, ಆಟಿ ಕಳೆಂಜ, ಮಾದಿರ, ಸುಗ್ಗಿ ಕುಣಿತ ಮತ್ತಿತರ ಗ್ರಾಮೀಣ ಸೊಗಡಿನ ಬಗ್ಗೆ ನಾಡಿನ ಯುವಜನತೆಗೆ ಪರಿಚಯಿಸುತ್ತಿದ್ದ ಬೊಲ್ಪು ಕಲಾ ತಂಡವು ಈಗಾಗಲೇ ರಾಜ್ಯದ ವಿವಿಧೆಡೆ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದೆ.
ಇದೀಗ ಗ್ರಾಮೀಣ ಪ್ರದೇಶದ ಹೊಸ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ, ತುಳುನಾಡಿನ ಜನರ ಬದುಕಿನ ವೈಶಿಷ್ಟ್ಯತೆ ಬಗ್ಗೆ ‘ಧಾರಾವಾಹಿ’ ಮೂಲಕ ತೆರೆದಿಡುವ ಬಗ್ಗೆ ವಿಶೇಷ ಪ್ರಯತ್ನ ನಡೆದಿದೆ.
ತುಳುನಾಡಿನ ಜಮೀನ್ದಾರಿಕೆ ಪದ್ಧತಿ, ಪಾಳೆಗಾರಿಕೆ, ಶೋಷಣೆ, ಜಾನಪದ ಸಾಹಿತ್ಯ, ಸೌಹಾರ್ದತೆ ಮತ್ತಿತರ ದೃಶ್ಯಗಳ ಜೊತೆಗೆ ತುಳುನಾಡಿನ ಜನರ ಸಂಸ್ಕೃತಿ, ಆಚಾರ-ವಿಚಾರ, ಕೃಷಿ ಬದುಕಿನ ಹಬ್ಬ, ತುಳುವರ ನೈಜ ಬದುಕಿನ ಚಿತ್ರಣವನ್ನು ಗ್ರಾಮೀಣ ಪ್ರದೇಶದಲ್ಲೇ ಸಂಪೂರ್ಣ ಚಿತ್ರೀಕರಿಸಲಾಗಿದೆ.
ಜಿಲ್ಲೆಯಲ್ಲಿ ಸರಣಿ ತುಳು ಚಲನಚಿತ್ರಗಳು ಬಿಡುಗಡೆಗೊಳ್ಳುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ತುಳು ‘ಧಾರಾವಾಹಿ’ ಯಾವ ರೀತಿ ಆಕಷರ್ಿಸುತ್ತದೆ ಎಂಬ ಕುತೂಹಲವೂ ಕಲಾಸಕ್ತರಲ್ಲಿ ಉಂಟಾಗಿದೆ.



