ವಾಷಿಂಗ್ಟನ್, ಜ.8 : ಇಂಥದ್ದೊಂದು ಪರಿಸ್ಥಿತಿ ಬರುತ್ತದೆ ಎಂದು ಮುಂಚಿತವಾಗಿ ಗೊತ್ತಾದರೂ ಪ್ರಕೃತಿ ಮುಂದೆ ಎಲ್ಲವೂ ಗೌಣ. ಕಳೆದು ಎರಡು ದಶಕಗಳಲ್ಲಿ ದಾಖಲಾಗಿರುವ ಅತಿ ಕಡಿಮೆ ತಾಪಮಾನಕ್ಕೆ ಅಮೆರಿಕದ ಜನತೆ ಅಕ್ಷರಶಃ ನಡುಗಿ ಹೋಗಿದ್ದಾರೆ. ಅಂಟಾರ್ಟಿಕಾಗಿಂತ ಅಮೆರಿಕದಲ್ಲಿ ಈಗ ಚಳಿ ತತ್ತರಿಸುವಂತೆ ಮಾಡಿದೆ.
ಇಲ್ಲಿವರೆವಿಗೂ ಸುಮಾರು 21ಕ್ಕೂ ಅಧಿಕ ಮಂದಿ ಚಳಿಗೆ ಬಲಿಯಾಗಿದ್ದಾರೆ. ಉತ್ತರ ಧ್ರುವ ಪ್ರದೇಶದಿಂದ ಕುಳಿರ್ಗಾಳಿ ಪೂರ್ವ ಕರಾವಳಿ ಕಡೆಗೆ ಬೀಸುತ್ತಿದ್ದು, ಟೆಕ್ಸಾಸ್, ಫ್ಲೋರಿಡಾದಲ್ಲಿ ತಾಪಮಾನ ಮತ್ತಷ್ಟು ಕುಸಿಯುವ ಆತಂಕ ವ್ಯಕ್ತವಾಗಿದೆ.ಉತ್ತರ ಮತ್ತು ದಕ್ಷಿಣ ಡಕೋಟ, ಮಿನಸೋಟಾ, ಲೋವ, ವಿಸ್ಕಾನ್ ಸಿನ್, ಮಿಶಗನ್ ನಲ್ಲಿ ತಾಪಮಾನ 20ರಿಂದ 40ಡ್ರಿ ಫೆ. (11-22 ಡಿಗ್ರಿ ಸೆಲ್ಸಿಯಸ್) ಗೆ ಇಳಿದಿದ್ದು, ನಿರಾಶ್ರಿತರ ತಂಗುದಾಣ ತುಂಬಿಹೋಗಿದೆ.
ಅಮೆರಿಕದ ಅರ್ಧದಷ್ಟು ನಗರಗಳ ರಸ್ತೆಗಳು ಮುಚ್ಚಿಹೋಗಿದ್ದು, ವಾಹನಗಳ, ಮನೆಗಳ ಮೇಲೆ ಹಿಮರಾಶಿ ಆವರಿಸಿವೆ. ಹೊರಬರಲು ಹೆಣಗಾಡುವಂತಹ ಪರಿಸ್ಥಿತಿ ಕಂಡುಬಂದಿದೆ. ಸುಮಾರು 2500 ವಿಮಾನಗಳು ಹಾರಾಟ ನಿಲ್ಲಿಸಿವೆ, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಮುಂದೇನು? ಎಂಬ ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಕಳೆದ 44 ವರ್ಷಗಳಲ್ಲಿ ಕಾಣದಂಥ ಚಳಿ ಅಮೆರಿಕದ ಜನತೆಯನ್ನು ತತ್ತರಿಸುವಂತೆ ಮಾಡಿದೆ. ಕೆನಡಾ ಗಡಿ ಭಾಗದಲ್ಲಿ ತಾಪಮಾನ ಕನಿಷ್ಠ -52 ಡಿಗ್ರಿ ಸೆ.ಗೆ ಇಳಿಯುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದಕ್ಕೆಲ್ಲ ಕಾರಣ ‘ಪೋಲಾರ್ ವರ್ಟೆಕ್ಸ್’: ಅಕ್ಷರಶಃ ಅತ್ತಿಂದ ಇತ್ತ ಓಡಾಡುವ ಓಲಾಡುವ ಕುಡುಕರಂತೆ ಬೀಸುವ ಈ ಪ್ರಬಲ ಕುಳಿರ್ಗಾಳಿ ಉತ್ತರ ಧ್ರುವ ಪ್ರದೇಶದಲ್ಲಿನ ಚಂಡಮಾರುತವಾಗಿದೆ. ಪೋಲಾರ್ ವರ್ಟೆಕ್ಸ್ ಪ್ರಭಾವ ಸಾಮಾನ್ಯವಾಗಿ 1,000-2000 ಕಿ.ಮೀಟರ್ ವರೆಗೆ ವ್ಯಾಪ್ತಿಸುತ್ತದೆ. ಸುಂಟರಗಾಳಿಯಂತೆ ಬೀಸುವ ಬಲವಾದ ಮಾರುತ ದ್ರುವ ಪ್ರದೇಶದ ಶೀತಗಾಳಿಯೊಂದಿಗೆ ಅಡ್ಡವಾಗಿ ಸಾಗುತ್ತದೆ. ಮಂಗಳಗ್ರಹಕ್ಕಿಂತಲೂ ಶೀತದ ವಾತಾವರಣ, ಅಲಾಸ್ಕಾ, ಅಂಟಾರ್ಟಿಕಾ ವಾತಾವರಣಕ್ಕೆ ಅಮೆರಿಕದ ವಾತಾವರಣವನ್ನು ಹೋಲಿಸಲಾಗುತ್ತಿದೆ. ಇತ್ತ ಸ್ವಿಟ್ಜರ್ಲೆಂಡ್, ಬ್ರಿಟನ್ನಿನಲ್ಲೂ ಪ್ರಬಲ ಚಳಿ ಮಾರುತ ಬೀಸುತ್ತಿದೆ. ಉತ್ತರ ಭಾರತದ ಕೆಲವು ಭಾಗ, ಜಮ್ಮು ಮತ್ತು ಕಾಶ್ಮೀರದಲ್ಲೂ ಪರಿಸ್ಥಿತಿ ಚಳಿ ಚಳಿ..
