ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಉಪ್ಪಿರ ಎಲಿಯಮಾಗಣೆ ಮುಜಿಲ್ನಾಯ ದೈವಸ್ಥಾನಕ್ಕೆ ವಾರ್ಷಿಕ ನೇಮೋತ್ಸವ ಪ್ರಯುಕ್ತ ಶನಿವಾರ ಮೂರು ಕಡೆಯಿಂದ ರಾಜನ್ ದೈವಗಳ ಭಂಡಾರ ಬಂದು ಒಟ್ಟು ಸೇರುವ ದೃಶ್ಯ ಆಕರ್ಷಕವಾಗಿತ್ತು. ಇಲ್ಲಿನ ಸಿದ್ಧಕಟ್ಟೆ ಸಮೀಪದ ಕಾರಣಿಕ ಪ್ರಸಿದ್ಧ ಉಪ್ಪಿರ ಎಲಿಯಮಾಗಣೆ ಮುಜಿಲ್ನಾಯ ದೈವಸ್ಥಾನಕ್ಕೆ ವಾರ್ಷಿಕ ನೇಮೋತ್ಸವ ಪ್ರಯುಕ್ತ ಶನಿವಾರ ಮೂರು ಕಡೆಯಿಂದ ರಾಜನ್ ದೈವಗಳ ಭಂಡಾರ ಬಂದು ಒಟ್ಟು ಸೇರುವ ದೃಶ್ಯ ಆಕರ್ಷಕವಾಗಿತ್ತು. ರಸ್ತೆಯುದ್ದಕ್ಕೂ ಅಪಾರ ಮಂದಿ ಭಕ್ತರು ಈ ದೃಶ್ಯ ಕಂಡು ಕಣ್ತುಂಬಿಕೊಂಡರು.

ಆರಂತಾಡಿ ಅರಮನೆ ಭಂಡಾರದ ಚಾವಡಿಯಿಂದ ಮೂಜಿಲ್ನಾಯ ದೈವದ ಭಂಡಾರ ಸಹಿತ ಸಂಗಬೆಟ್ಟು ಗುತ್ತಿನಿಂದ ಕೊಡಮಣಿತ್ತಾಯ ಮತ್ತು ಮೂಡು ಪಾಲ್ಜಾಲುವಿನಿಂದ ಪರಿವಾರ ದೈವಗಳ ಭಂಡಾರ ಪಲ್ಲಕಿಯಲ್ಲಿ ತರಲಾಯಿತು. ಇದೇ ವೇಳೆ ದೈವದ ಪಾತ್ರಿಗಳು ಮತ್ತು ಸಾಂಪ್ರದಾಯಿಕ ಪರಿಕರಗಳನ್ನು ಹಿಡಿದ ಪರಿಚಾರಕರು ಬ್ಯಾಂಡು, ವಾದ್ಯ, ಕೊಂಬು, ಪಟಾಕಿ ಸದ್ದು ಗಮನ ಸೆಳೆಯಿತು. ದೈವಸ್ಥಾನದಲ್ಲಿ ದೈವಗಳಿಗೆ ಗಗ್ಗರ ಸೇವೆ, ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಪೂಂಜ ಕ್ಷೇತ್ರದ ಕೃಷ್ಣ ಪ್ರಸಾದ್ ಅಸ್ರಣ್ಣ ಸಹಿತ ೬ ಗ್ರಾಮಗಳ ಭಕ್ತರು ಇದ್ದರು.
