ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿದರು. ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಭೂಪರಿವರ್ತನೆ ವಿಳಂಬ ಸದಸ್ಯರ ಆಕ್ರೋಶ ಬಂಟ್ವಾಳ ತಾಲ್ಲೂಕಿನಲ್ಲಿ ಮನೆ ಕಟ್ಟುವುದಕ್ಕಾಗಿ ಜನ ಸಾಮಾನ್ಯರು ಭೂ ಪರಿವರ್ತನೆ ಮಾಡಿಸಿಕೊಳ್ಳಲು ಅರ್ಜಿ ಹಾಕಿ ವರ್ಷವಿಡೀ ಅಲೆದಾಟ ನಡೆಸುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು ಆರೋಪಿಸಿದರು.
ಇಲ್ಲಿನ ಬಿ.ಸಿ.ರೋಡಿನಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಗಮನ ಸೆಳೆದರು. ಅರ್ಜಿದಾರರು ತಾಲ್ಲೂಕು ಕಚೇರಿಯಿಂದ ಎ.ಸಿ. ಕಚೇರಿ ಸಹಿತ ಎಡಿಸಿ ಮತ್ತು ಜಿಲ್ಲಾಧಿಕಾರಿ ಕಚೇರಿ ಅಲೆದಾಡುವಂತಾಗಿದೆ. ಇದಕ್ಕಾಗಿ ೧೦ ಸೆಂಟ್ಸ್ ಜಮೀನು ಭೂಪರಿವರ್ತನೆ ತಹಶೀಲ್ದಾರರಿಗೆ ಅಧಿಕಾರ ನೀಡಲು ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದರು. ೯೪ ಸಿ ಮತ್ತು ಸಿಸಿ ಹಕ್ಕುಪತ್ರ ವಿಳಂಬ, ಸೋರ್ಣಾಡು-ಸಂಗಬೆಟ್ಟು ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ ಬಗ್ಗೆಯೂ ಗಮನ ಸೆಳೆದರು.
ವಿಟ್ಲಪಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕೈಗೊಂಡಿದ್ದರೂ ಜನ ಸಾಮಾನ್ಯ ರಜಮೀನು ಸರ್ವೆ ಮತ್ತಿತರ ಸಮಸ್ಯೆಗೆ ಏಕೆ ಪರಿಹಾರ ಸಿಕ್ಕಿಲ್ಲ…? ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ ಪ್ರಶ್ನಿಸಿದರು. ಕೊರೋನ ಬಗ್ಗೆ ಸರ್ಕಾರದ ಸುತ್ತೋಲೆ ಗೊಂದಲ ನಿವಾರಿಸಿ ನಿಯಮಾವಳಿ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಆಗ್ರಹಿಸಿದರು.
ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ ಪಡೆಯಲು ನಾಗರಿಕರಿಗೆ ಅನುಕೂಲ ಮಾಡಿ ಕೊಡಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ತುಂಗಪ್ಪ ಬಂಗೇರ ಆಗ್ರಹಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾ.ಪಂ. ಸದಸ್ಯರಾದ ಹೈದರ್ ಕೈರಂಗಳ, ಧನಲಕ್ಷ್ಮಿ ಸಿ. ಬಂಗೇರ, ಆದಂ ಕುಂಞ, ಯಶವಂತ ಪೊಳಲಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಇಒ ರಾಜಣ್ಣ ಇದ್ದರು.
ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆ ಶಾಸಕ ರಾಜೇಶ ನಾಯ್ಕ್, ಮಾಜಿ ಸಚಿವ ರೈ ತಂಡದಿಂದ ಬಿರುಸಿನ ಚುನಾಚಣಾ ಪ್ರಚಾರ ಕೇರಳ ರಾಜ್ಯದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಗಡಿಭಾಗದ ಮಂಜೇಶ್ವರ ಮತ್ತು ಕಾಸರಗೋಡು ಮತ್ತಿತರ ಕಡೆಗಳಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದ ಪ್ರತ್ಯೇಕ ತಂಡವು ಅಲ್ಲಿಗೆ ತೆರಳಿ ಕಳೆದ ಕೆಲವು ದಿನಗಳಿಂದ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಪರ ಪ್ರಚಾರದಲ್ಲಿ ಶಾಸಕರೊಂದಿಗೆ ಪಕ್ಷದ ಪ್ರಮುಖರಾದ ರಮಾನಾಥ ರಾಯಿ ಮತ್ತಿತರರು ಪಾಲ್ಗೊಂಡರು.
ಕಾಸರಗೋಡಿನಲ್ಲಿ ಬಿ.ಜೆ.ಪಿ.ಅಭ್ಯರ್ಥಿ ಅಡ್ವೊಕೇಟ್ ಶ್ರೀಕಾಂತ್ ಕೆ. ಪರವಾಗಿ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು, ಅಮ್ಮುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಮನ ಆಚಾರ್ಯ, ರಾಯಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಯಶವಂತ ನಗ್ರಿ ಮತ್ತಿತರರು ಇದ್ದರು.
ಇನ್ನೊಂದೆಡೆ ಮಂಜೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಕೆ.ಎಂ.ಆಶ್ರಫ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಮಾಜಿ ಸಚಿವ ಬಿ.ರಮಾನಾಥ ರೈ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮತ್ತಿತರರು ಪಾಲ್ಗೊಂಡರು. ಇದೇ ವೇಳೆ ತ್ರಿಕಾರಿಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಜೋಸೆಫ್ ಪರವಾಗಿ ರೋಡ್ ಶೋ ನಡೆಸಿ ಗಮನ ಸೆಳೆದಿದ್ದಾರೆ.

