ಬಂಟ್ವಾಳ:ಇಲ್ಲಿನ ಅರಳ ಗ್ರಾಮದ ಹಿರ್ಣಿ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಇದರ ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಕಟೀಲು ಮೇಳದಿಂದ ಶ್ರೀದೇವಿ ಮಹಾತ್ಮೆಯಕ್ಷಗಾನ ಬಯಲಾಟ ಮತ್ತು ಕಲಾವಿದರಿಗೆ ಸಮ್ಮಾನ ಕಾರ್ಯಕ್ರಮ ಶನಿವಾರ ರಾತ್ರಿ ನಡೆಯಿತು.
ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ಗಣ ಹೋಮ, ದುರ್ಗಾಹೋಮ, ಅಶ್ಲೇಷ ಬಲಿ ಪೂಜೆ ನಡೆಯಿತು. ರಾತ್ರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಟೀಲು ದೇವಳದ ಆನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಆಶೀರ್ವಚನ ನೀಡಿದರು. ಕಟೀಲು ದೇವಿಗೆ ವಷ೯ವಿಡೀ ಭಕ್ತರಿಂದ ಯಕ್ಷಗಾನ ಸೇವೆ ಸಮಪ೯ಣೆಯಾಗುತ್ತಿದ್ದು, ಯಕ್ಷಗಾನ ಕಲೆಯಲ್ಲಿ ಆಂಗ್ಲ ಭಾಷೆ ಸಹಿತ ರಾಜಕೀಯ ಮತ್ತಿತರ ಅನಗತ್ಯ ವಿಚಾರ ಬಳಕೆ ಸಲ್ಲದು ಎಂದರು. ಅರಳ ಗ್ರಾ.ಪಂ.ಮಾಜಿ ಅಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ, ಶಿಕ್ಷಕ ಹರಿಪ್ರಸಾದ್ ರಾವ್ ಮತ್ತಿತರರು ಇದ್ದರು.ಇದೇ ವೇಳೆ ಸ್ಥಳೀಯ ಜನಪ್ರಿಯ ಕಲಾವಿದರಾದ ಅರಳ ಗಣೇಶ ರೈ, ಪ್ರೇಮ್ ರಾಜ್ ಕೊಯಿಲ ಇವರನ್ನು ಸನ್ಮಾನಿಸಲಾಯಿತು. ಚಂದ್ರಶೇಖರ ಭಟ್ ಕೊಂಕಣಾಜೆ ಅಭಿನಂದನಾ ಭಾಷಣ ಮಾಡಿದರು.
