ಜೀರೋ ತ್ಯಾಜ್ಯದ ಹೀರೋ, ಬೆಂಗಳೂರಿನ ಜ್ಯೂಸ್ ರಾಜಾ
ಭಾರತ : ಭಾರತೀಯರು ಅಂದಾಜು 40% ಆಹಾರವನ್ನು ಪ್ರತಿ ವರ್ಷ ಎಸೆಯುತ್ತಾರೆ. ಇದು ಒಂದು ವರ್ಷದಲ್ಲಿ 6.7 ಕೋಟಿ ಟನ್ ಕಸಕ್ಕೆ ಎಸೆದ ಹಾಗೆ ಎಂದು ಭಾವಿಸಬಹುದು. ಇದು ನಿಮಗೆ ಆಘಾತ ನೀಡಿದರೆ, ಚಿಂತೆ ಮಾಡಬೇಡಿ! ಯಾಕೆಂದರೆ ನಮ್ಮ ಬೆಂಗಳೂರಿನಲ್ಲಿ ಒಬ್ಬರು ಶೂನ್ಯ ತ್ಯಾಜ್ಯದ ಹೀರೋ ಇದ್ದಾರೆ. ಈ ಆನಂದ್ ರಾಜ್ ನಗರದಲ್ಲಿ ಜ್ಯೂಸ್ ರಾಜಾ ಎಂದೇ ಹೆಸರಾಗಿದ್ದಾರೆ. ಈ ಮಾಜಿ ರೇಡಿಯೋ ಜಾಕಿ ತನ್ನ ಜನಪ್ರಿಯ ಜ್ಯೂಸ್ ಶಾಪ್‌ನಲ್ಲಿ ಹಣ್ಣಿನ ಜ್ಯೂಸ್ ಅನ್ನು ಅವುಗಳ ಚಿಪ್ಪಿನಲ್ಲೇ ಒದಗಿಸುವ ಅಪರೂಪದ ಕಲ್ಪನೆಯನ್ನು ಸಾಕಾರಗೊಳಿಸಿದ್ದು, ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ಫೂರ್ತಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಹದಿಮೂರು ವರ್ಷಗಳವರೆಗೆ ಆರ್‌ಜೆ ಆಗಿ ಕೆಲಸ ಮಾಡಿದ್ದ ಆನಂದ್ ರಾಜ್, ತನ್ನ ತಂದೆ ನಡೆಸುತ್ತಿದ್ದ ಜ್ಯೂಸ್ ಶಾಪ್ ‘ಈಟ್ ರಾಜಾ’ ಅನ್ನು ವಹಿಸಿಕೊಂಡರು. ಅವರ ವಿಶಿಷ್ಟ ಕಾನ್ಸೆಪ್ಟ್‌ನಿಂದ ಶಾಪ್ ಹೆಸರಾಯಿತು. ಅತ್ಯಂತ ಜನಪ್ರಿಯ ಪರಿಸರ ಸ್ನೇಹಿ ಕೆಫೆಯಾಗಿ ಇದು ಮಾರ್ಪಟ್ಟಿತು. ರುಚಿಕರವಾದ ಜ್ಯೂಸ್ ಅನ್ನು ಹೀರಲು ನೂರಾರು ಜನರು ನಿತ್ಯವೂ ಇಲ್ಲಿಗೆ ಆಗಮಿಸುತ್ತಾರೆ. ಅಷ್ಟೇ ಅಲ್ಲ, ಇಲ್ಲಿ ಗ್ರಾಹಕರಿಗೆ ಆತ್ಮತೃಪ್ತಿಯೂ ಆಗುತ್ತದೆ. ರುಚಿಕರವಾದ 99 ವಿಧದ ಜ್ಯೂಸ್ ಅನ್ನು ತಯಾರಿಸುವ ಇವರು ಬಾಳೆಹಣ್ಣು, ಕ್ಯಾಪ್ಸಿಕಂ, ಕಲ್ಲಂಗಡಿ, ಕಿತ್ತಳೆ ಮತ್ತು ಇತರ ಹಲವು ವಿಧದ ಹಣ್ಣಿನ ಚಿಪ್ಪಿನಲ್ಲೇ ಜ್ಯೂಸ್ ಅನ್ನು ಗ್ರಾಹಕರಿಗೆ ಒದಗಿಸುತ್ತಾರೆ. ಈ ಮೂಲಕ ಇವರು ತ್ಯಾಜ್ಯವನ್ನೂ ಕಡಿಮೆ ಮಾಡುತ್ತಾರೆ.
ಜ್ಯೂಸ್‌ನ ತ್ಯಾಜ್ಯವನ್ನು ಬಳಸಿ ನಗರದಾದ್ಯಂತ ಜಾನುವಾರುಗಳಿಗೆ ಪೌಷ್ಠಿಕಾಂಶವನ್ನೂ ಒದಗಿಸುತ್ತಾರೆ. ಉಳಿದ ಹಣ್ಣಿನ ಭಾಗಗಳನ್ನು ಬಳಸಿ ಜೈವಿಕ ಕಿಣ್ವಗಳ ಮೂಲಕ ನೈಸರ್ಗಿಕ ಸ್ವಚ್ಛತಾ ದ್ರಾವಣವನ್ನು ತಯಾರಿಸುತ್ತಾರೆ. ಜ್ಯೂಸ್ ಅನ್ನು ಗ್ರಾಹಕರಿಗೆ ಒದಗಿಸಲು ಗ್ಲಾಸ್‌ಗಳನ್ನು ಬಳಸದೇ, ಜ್ಯೂಸ್ ರಾಜಾ ಪ್ರತಿ ವರ್ಷ ಅಂದಾಜು 54,750 ಲೀಟರ್ ನೀರನ್ನು ಉಳಿತಾಯ ಮಾಡುತ್ತಾರೆ.