ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ರನ್ನು ಘೋಷಿತ ಅಪರಾಧಿಗಳೆಂದು ದೆಹಲಿ ನ್ಯಾಯಾಲಯ ಘೋಷಿಸಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಂತೆ ವಿಚಾರಣೆ ನಡೆಸಿದ್ದ ದೆಹಲಿ ಪೊಲೀಸರು, ದಾವೂದ್ ಮತ್ತು ಛೋಟಾ ಶಕೀಲ್ ಪಾತ್ರದ ಕುರಿತು ತನಿಖೆ ನಡೆಸಿದ್ದರು. ತನಿಖೆ ವೇಳೆ ಈ ಇಬ್ಬರೂ ಪಾತಕಿಗಳ ಸ್ಥಿರ ಮತ್ತು ಚರಾಸ್ತಿಗಳ ಕುರಿತು ಪೊಲೀಸರು ಮಾಹಿತಿ ಪಡೆದಿದ್ದರು. ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲಾಗಿ, ನ್ಯಾಯಾಲಯ ಇಂದು ಇಬ್ಬರೂ ಪಾತಕಿಗಳನ್ನು ಅಪರಾಧಿಗಳೆಂದು ಘೋಷಣೆ ಮಾಡಿದೆ.

ಇದಕ್ಕೂ ಮೊದಲು ಇದೇ ಪ್ರಕರಣಕ್ಕೆ ಸಂಬಂಧಸಿದಂತೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಇಬ್ಬರ ವಿರುದ್ಧ ಬಂಧನ ರಹಿತ ವಾರಂಟ್ ಜಾರಿ ಮಾಡಿತ್ತು. ಪ್ರಸ್ತುತ ಪ್ರಕರಣದಲ್ಲಿ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ದಾವೂದ್ನ ಮುಂಬೈನ ನಿವಾಸವನ್ನು ಈ ಹಿಂದೆ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ಕೂಡ ಸೇರಿಸಲಾಗಿತ್ತು. 1993ರ ಮುಂಬೈ ಸರಣಿ ಸ್ಫೋಟದ ನಂತರ ಈ ಇಬ್ಬರು ಪಾತಕಿಗಳು ಭಾರತದಿಂದ ಪರಾರಿಯಾಗಿರುವ ವಿಚಾರವನ್ನು ಕೂಡ ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಸಂಬಂಧ ಕಳೆದ 2013ರ ಜುಲೈ 30ರಂದು ಸುಮಾರು 6 ಸಾವಿರ ಪುಟಗಳ ಚಾಜರ್್ ಶೀಟ್ ದಾಖಲಿಸಿದ್ದ ದೆಹಲಿ ಪೊಲೀಸರು, ಐಪಿಎಲ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಅವರ ನೇರ ಕೈವಾಡವಿದೆ ಮತ್ತು ಈ ಇಬ್ಬರೂ ಪಾತಕಿಗಳು ತಮ್ಮ ತಮ್ಮ ಸಹಚರರ ಮೂಲಕ ಬೆಟ್ಟಿಂಗ್ ದಂಧೆಯನ್ನು ನಿಯಂತ್ರಿಸುತ್ತಿದ್ದಾರೆ ಎಂಬುದನ್ನು ನಮೂದಿಸಿದ್ದರು.
2013ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಬೆಳಕಿಗೆ ಬಂದಿದ್ದ ಫಿಕ್ಸಿಂಗ್ ಪ್ರಕರಣದಲ್ಲಿ ಕ್ರಿಕೆಟಿಗರಾದ ಶ್ರೀಶಾಂತ್, ಅಜಿತ್ ಚಾಂಡಿಲಾ, ಅಂಕಿತ್ ಚೌಹ್ವಾಣ್ ಅವರು ಸಿಕ್ಕಿಬಿದಿದ್ದರು. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
