ಮುಂಬೈ: ದೀರ್ಘ ಕಾಲದಿಂದ ಕೆಲಸವಿಲ್ಲದ ಬೇಸರ ಜೊತೆಗೆ ಮನೆಯಲ್ಲಿ ಹಾಸಿಗೆ ಹಿಡಿದಿರುವ ತಾಯಿ. ಈ ಎಲ್ಲಾ ದುಸ್ಥಿತಿಯಿಂದ ಹತಾಶೆಗೊಳಗಾದ ವ್ಯಕ್ತಿಯೊರ್ವ ಪಾಶ್ರ್ವವಾಯು ಪೀಡಿತೆಯಾಗಿ ಹಾಸಿಗೆ ಹಿಡಿದಿದ್ದ ತನ್ನ ತಾಯಿಯನ್ನೇ ಕೊಂದ ಘಟನೆ ಮುಂಬೈಯ ಕೊಲಾಬಾದಲ್ಲಿ ನಡೆದಿದೆ.
ಆರೋಪಿಯನ್ನು ರಾಮ್ ಕಾಶಿನಾಥ್ ಕೀರ್(55) ಎಂದು ಗುರುತಿಸಲಾಗಿದೆ. ಎಂಟನೆ ತರಗತಿವರೆಗೆ ಕಲಿತಿದ್ದ ಕೀರ್ ದುಬೈಯ ಹೊಟೇಲ್ ಒಂದರಲ್ಲಿ ಉದ್ಯೋಗಿಯಾಗಿದ್ದ. ಐದು ವರ್ಷಗಳ ಕೆಳಗೆ ಭಾರತಕ್ಕೆ ಮರಳಿದ್ದ ಆತ ಇಲ್ಲಿಯೇ ಉದ್ಯೋಗ ಹುಡುಕುತ್ತಿದ್ದ ಆದರೆ ಯಾವುದೇ ಉದ್ಯೋಗ ಸಿಗದೆ ಕಂಗಾಲಾಗಿದ್ದ. ಇದರ ಜೊತೆಗೆ ಆತನ ತಾಯಿ ರೋಗ ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಆಕೆಯ ಔಷಧಿಯ ವೆಚ್ಚ ಕೂಡಾ ದಿನದಿಂದ ದಿನಕ್ಕೆ ಏರುತ್ತಿತ್ತು. ಇದರಿಂದ ಹತಾಶೆಗೊಳಗಾಗಿದ್ದ ಕೀರ್ ದಿನನಿತ್ಯ ಕುಡಿದು ಬಂದು ತನ್ನ ತಾಯಿ ಮತ್ತು ಪತ್ನಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ. ಘಟನೆ ನಡೆದ ದಿನವೂ ಕೂಡಾ ಕುಡಿದು ಮನೆಗೆ ಬಂದ ಕೀರ್ ಪತ್ನಿ ಮತ್ತು ತಾಯಿಗೆ ಹೊಡೆಯಲು ಆರಂಭಿಸಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ ಹೆದರಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದಳು. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಆಕೆ ಅದಾಗಲೇ ಮೃತಪಟ್ಟಿದ್ದಳು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
