ದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಐದು ದಿನಗಳ ಅಮೆರಿಕ ಪ್ರವಾಸ ಗುರುವಾರದಿಂದ ಶುರುವಾಗಲಿದೆ. ಸೆಪ್ಟೆಂಬರ್ ೨೭ರಂದು ವಿಶ್ವಸಂಸ್ಥೆ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಅಧ್ಯಕ್ಷ ಬರಾಕ್ ಒಬಾಮ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಅಧಿಕಾರಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರೊಂದಿಗೆ ಮೋದಿ ಬಿಡುವಿಲ್ಲದ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ, ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮೋದಿ ದ್ವಿಪಕ್ಷೀಯ ಸಮಾಲೋಚನೆ ನಡೆಸುವರು. ಆದರೆ, ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿಯಾಗುವ ಕಾರ್ಯಕ್ರಮ ಇಲ್ಲ.
ಭಾರತದಲ್ಲಿ ಹೂಡಿಕೆಗೆ ಆಹ್ವಾನ ನೀಡುವ ಉದ್ದೇಶದಿಂದ ಮೋದಿ, ಗೂಗಲ್, ಬೋಯಿಂಗ್ ಆಂಡ್ ಜನರಲ್ ಎಲೆಕ್ಟ್ರಿಕ್ಸ್ ಸೇರಿದಂತೆ ಅಮೆರಿಕದ ೧೫ಕ್ಕೂ ಹೆಚ್ಚು ಪ್ರಮುಖ ಕಾರ್ಪೋರೆಟ್ ದಿಗ್ಗಜರನ್ನು ಭೇಟಿಯಾಗುವರು.

