ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿದ ಮಂಗಳಯಾನ ನೌಕೆ ಬುಧವಾರ ಬೆಳಗ್ಗೆ ಸುಸೂತ್ರವಾಗಿ ಮಂಗಳನ ಕಕ್ಷೆ ಸೇರಿದ್ದು, ಇದೀಗ ಅಲ್ಲಿಂದ ಸುಂದರವಾದ 5 ಫೋಟೋಗಳನ್ನು ಕಳುಹಿಸಿಕೊಟ್ಟಿದೆ. ಮಂಗಳಯಾನ ಕಳುಹಿಸಿಕೊಟ್ಟ ಮಂಗಳ ಗ್ರಹದ ಕಲರ್ ಸುಂದರ ಚಿತ್ರಗಳನ್ನು ಇಸ್ರೋ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಮಂಗಳಯಾನ ನೌಕೆ ಮಾರ್ಸ್ ಅರ್ಬಿಟರ್ ಮಿಷನ್ MOM) ಸ್ಪೇಸ್‌ಕ್ರಾಫ್ಟ್ ತನ್ನ 440 ಲಿಕ್ವಿಡ್ ಅಪೋಜೀ ಮೋಟರ್ ನ(LAM) ದ್ರವ ಉರಿಸಿ ವೇಗ ತಗ್ಗಿಸಿಕೊಂಡು ಎಂಟು ಸಣ್ಣ ಲಿಕ್ವಿಡ್ ಎಂಜಿನ್ ಗಳೊಂದಿಗೆ ಬುಧವಾರ ಬೆಳಗ್ಗೆ 7 ಗಂಟೆ 47.36 ಸೆಕೆಂಡ್‌ಗೆ ಮಂಗಳನ ಕಕ್ಷೆಗೆ ಪ್ರವೇಶಿಸಿತ್ತು. 8 ಗಂಟೆ 8 ಸೆಕೆಂಡ್‌ಗೆ ಮಂಗಳಯಾನ ಕಕ್ಷೆ ಸೇರಿರುವ ಕುರಿತು ಭೂಮಿಗೆ ಸಂದೇಶ ತಲುಪಿತು. ಪ್ರಸ್ತುತ ನೌಕೆಯನ್ನು 2013 ನವೆಂಬರ್ 5 ರಂದು ಉಡಾವಣೆ ಮಾಡಲಾಗಿತ್ತು. ಸೂಕ್ತ ಕಕ್ಷೆಗೆ ಸೇರಿಸಲು 6 ಹಂತಗಳ ಪೂರಕ ಪ್ರಕ್ರಿಯೆ ನಡೆಸಲಾಗಿದ್ದು, 2013 ಡಿಸೆಂಬರ್ 1ರಂದು ನೌಕೆ ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಕಾರ್ಯ ನಡೆದಿತ್ತು. ಹೀಗೆ 6 ಪ್ರಕ್ರಿಯೆಗಳನ್ನು ಒಂದರ ನಂತರ ಮಾಡಿ ಮುಗಿಸಿ ಯಶಸ್ವಿಯಾಗಿದ್ದ ಇಸ್ರೋ ವಿಜ್ಞಾನಿಗಳು ಬುಧವಾರ ನೌಕೆಯನ್ನು ಮಂಗಳನ ಕಕ್ಷೆಗೆ ಸೇರಿಸಿದ್ದರು. ಈ ಮೂಲಕ ಮೊದಲ ಮಂಗಳಯಾನದಲ್ಲೇ ಯಶಸ್ವಿಯಾದ ಚರಿತ್ರೆ ಭಾರತದ ಪಾಲಾಗಿದೆ. ಅಲ್ಲದೆ ಮಂಗಳಯಾನದಲ್ಲಿ ಯಶಸ್ವಿಯಾದ ನಾಲ್ಕನೆಯ ಹಾಗು ಏಷ್ಯಾದ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗಿದೆ.

