ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಾಗಿ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದ 214 ಖಾಸಗಿ ಕಂಪನಿಗಳ ಹಂಚಿಕೆಯನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಬುಧವಾರ ಮಹತ್ವದ ಆದೇಶ ನೀಡಿದೆ.
1993ರಿಂದ 2010ರವರೆಗಿನ ಹಂಚಿಕೆಯಾಗಿದ್ದ ಕಲ್ಲಿದ್ದಲು ನಿಕ್ಷೇಪಗಳ ಪೈಕಿ ಸರ್ಕಾರಿ ಸ್ವಾಮ್ಯದ ನಾಲ್ಕು ಹಂಚಿಕೆಗಳನ್ನು ಹೊರತುಪಡಿಸಿ ಖಾಸಗಿ ಸ್ವಾಮ್ಯದ 214 ಹಂಚಿಕೆಗಳನ್ನು ರದ್ದುಗೊಳಿಸಿದ್ದು, ಅವುಗಳನ್ನು ಮುಚ್ಚಲು 6 ತಿಂಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ನೀಡಿದೆ. ಸರ್ಕಾರಿ ಸ್ವಾಮ್ಯದ ಸಸನ್, ಯುಎಂಪಿಪಿ, ಎನ್‌ಟಿಪಿಸಿ ಹಾಗೂ ಸೇಲ್ ಕಂಪನಿಗಳು ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿರುವುದರಿಂದ ಈ ನಾಲ್ಕು ಕಂಪನಿಗಳ ಹಂಚಿಕೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿಲ್ಲ.
ಇನ್ನುಳಿಂದತೆ ಖಾಸಗಿ ಸ್ವಾಮ್ಯದ 214 ಕಂಪನಿಗಳಿಗೆ ಮಾಡಲಾಗಿದ್ದ ಹಂಚಿಕೆಯನ್ನು ರದ್ದುಗೊಳಿಸಿದೆ. 1993ರಿಂದ 2009ರವರೆಗಿನ ಸಮಯದಲ್ಲಿನ ಎಲ್ಲ ಹಂಚಿಕೆಗಳಲ್ಲಿ ಅಕ್ರಮ ಕಂಡುಬಂದಿದ್ದು, ಹಂಚಿಕೆ ಸಂಬಂಧಿಸಿದಂತೆ ಯಾವುದೇ ನಿಯಮಾವಳಿಗಳನ್ನು ಪಾಲಿಸಿಲ್ಲ.
ನಿಕ್ಷೇಪ ಹಂಚಿಕೆಯಲ್ಲಿ ಯಾವುದೇ ಪಾರದರ್ಶಕತೆ ಕಂಡುಬಂದಿಲ್ಲ. ಕಾನೂನು ಬಾಹಿರವಾಗಿ ಮತ್ತು ನಿಯಾಮಾವಳಿಗಳನ್ನು ಗಾಳಿಗೆ ತೂರಿ ನಿಕ್ಷೇಪ ಹಂಚಿಕೆ ಮಾಡಲಾಗಿದೆ ಎಂದು ಕಳೆದ ಆಗಸ್ಟ್ 25 ರಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಇಂದು ಅಧಿಕೃತವಾಗಿ ಹಂಚಿಕೆಗಳನ್ನು ರದ್ದುಗೊಳಿಸಿದೆ.
