ಬೆಂಗಳೂರು: ಭಾರತ ಅನ್ಯಗ್ರಹ ಯಾನದಲ್ಲಿ ಇತಿಹಾಸ ಬರೆದಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ಉಡಾಯಿಸಿರುವ ಮಂಗಳನೌಕೆ ಬುಧವಾರ ಬೆಳಗ್ಗೆ ಯಶಸ್ವಿಯಾಗಿ ಕೆಂಪುಕಾಯದ ಕಕ್ಷೆಗೆ ಸೇರಿದೆ. ಮಾಮ್ ನೌಕೆ ಮಂಗಳನ ಕಕ್ಷೆಗೆ ಸೇರಿದೆ. ಅತಿ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಕೈಗೊಂಡ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಐತಿಹಾಸಿಕ ಮಂಗಳಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದಾರೆ. ಎರಡು ದಿನದ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸಿರುವ ಮೋದಿ ಬುಧವಾರ ಬೆಳಗ್ಗೆ 7 ಗಂಟೆಗೆ ಇಸ್ರೋಗೆ ತಲುಪಿದರು. ಸಿಎಂ ಸಿದ್ದರಾಮಯ್ಯ ಸಹ ಮೋದಿ ಅವರ ಜೊತೆ ಇಸ್ರೋಗೆ ತೆರಳಿದ್ದು, ಮಂಗಳಯಾನವನ್ನು ವೀಕ್ಷಿಸಿದರು.
ಮೋದಿ ಭಾಷಣದ ಮುಖ್ಯಾಂಶಗಳು *ಭಾರತ ಇಂದು ಆರ್ಥಿಕವಾಗಿ ಪ್ರಬಲವಾಗುತ್ತಿದೆ. ನಮ್ಮ ದೇಶದ ಯುವಕರಲ್ಲಿ ಕೌಶಲ್ಯತೆ ಇದ್ದು, ಅದನ್ನು ಇಸ್ರೋ ಬಳಸಿಕೊಂಡು ಹೊಸ ಹೊಸ ಸಂಶೋಧನೆ ಮಾಡಬೇಕು ಎಂದು ಮೋದಿ ಕರೆ ನೀಡಿದರು. * ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಮಂಗಳವಯಾನ ಯೋಜನೆಯಲ್ಲಿ ಯಶಸ್ಸು ಸಿಕ್ಕಿಲ್ಲ. ಹಾಲಿವುಡ್ ಚಿತ್ರಗಳಿಗಿಂತಲೂ ಕಡಿಮೆ ಖರ್ಚಿನಲ್ಲಿ ನಾವು ಮಂಗಳಯಾನವನ್ನು ಪೂರೈಸಿದ್ದೇವೆ ಎಂದು ಮೋದಿ ಬಣ್ಣಿಸಿದರು. * ಒಂದು ವೇಳೆ ಯೋಜನೆ ವಿಫಲವಾದರೆ ನಾನೇ ಜವಾಬ್ದಾರನಾಗುತ್ತಿದ್ದೆ, ಸಫಲವಾದರೆ ಅದು ವಿಜ್ಞಾನಿಗಳ ಸಾಧನೆ. ಸರ್ಕಾರ ವಿಜ್ಞಾನಿಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮೋದಿ ಹೇಳಿದರು.
