ದೆಹಲಿ: ರಾಜಧಾನಿಯಲ್ಲಿ ಮಾನವೀಯತೆ ಸತ್ತೇ ಹೋಗಿದೆ ಎಂಬಂತೆ ಭಾಸವಾಗುತ್ತಿದೆ. ಯುವತಿಯರ ಮೇಲಿನ ನಿರಂತರ ಅತ್ಯಾಚಾರದಿಂದ ಕುಖ್ಯಾತಿಗೆ ಒಳಗಾಗಿದ್ದ ದೇಶದ ರಾಜಧಾನಿ ದೆಹಲಿಯಲ್ಲಿ ಇದೀಗ ಈಶಾನ್ಯ ರಾಜ್ಯಗಳ ಯುವಕರ ಮೇಲೆ ದಾಳಿ ಅವ್ಯಾಹತವಾಗಿ ನಡೆಯುತ್ತಿದೆ.
ಕಳೆದ ವಾರವಷ್ಟೇ ಅರುಣಾಚಲಾ ಪ್ರದೇಶದ ನಿಡೊ ಎಂಬ ಯುವಕನನ್ನು ಜನಾಂಗೀಯ ನಿಂದನೆಗೆ ಒಳಪಡಿಸಿ ಹತ್ಯೆ ಮಾಡಿದ ಘಟನೆ ಹಸಿಯಾಗಿರುವಂತೆಯೇ ಭಾನುವಾರದಂದು ಮತ್ತಿಬ್ಬರು ಮಣಿಪುರದ ಯುವಕರ ಮೇಲೆ ಜನಾಂಗೀಯ ನಿಂದನೆ ಮತ್ತು ದಾಳಿ ನಡೆಸಲಾಗಿದೆ. ದೆಹಲಿಯ ಅಂಬೇಡ್ಕರ್ ನಗರದಲ್ಲಿ ಮೋಟಾರ್ ಬೈಕೇರಿ ಬಂದ ದುಷ್ಕಮರ್ಿಗಳು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಣಿಪುರಿ ಯುವಕರ ಮೇಲೆ ಹಲ್ಲೆ ನಡೆಸಿ ಪರಾರಿಯಗಿದ್ದಾರೆ. ಈ ವೇಳೆ ದಾಳಿಕೋರರು ಈ ಯುವಕರನ್ನು ಚಿಕ್ನಿ ಮತ್ತು ನೇಪಾಲಿ ಎಂದು ನಿಂದಿಸಿರುವುದಾಗಿ ತಿಳಿದುಬಂದಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ವುಮ್ಸೊನ್ಮಂಗ್ ನೌಲಕ್ ಎಂಬಾತನನ್ನು ಸೂಕ್ತ ಚಿಕಿತ್ಸೆಯ ನಂತರ ಬಿಡುಗಡೆಗೊಳಿಸಿದ್ದರೆ ಗಿಂಕನ್ಸೌನ್ ನೌಲಕ್ ಎಂಬಾತ ಗಂಭೀರವಾಗಿ ಗಾಯಗೊಂಡ ಕಾರಣ ಇನ್ನೂ ಆಸ್ಪತ್ರೆಯಲ್ಲೇ ಇದ್ದಾನೆ. ಈ ಸಂಬಂಧ ಇಬ್ಬರು ಅಪ್ರಾಪ್ತ ವಯಸ್ಸಿನ ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
