ಸುದ್ದಿ9ವಿಶೇಷ: ವಿದ್ಯೆ ಕಲಿಸಿದ ಶಿಕ್ಷಕರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಅದೇ ದೇವರಿಗೆ ಅನ್ಯಾಯವಾಗುತ್ತಿರುವುದು ಮಾತ್ರ ಯಾವುದೇ ಸಂಘಟನೆಗಳಿಗೆ, ಆಯೋಗದವರಿಗೆ ನಾಟದೇ ಇರುವುದು ದೊಡ್ಡ ದುರದೃಷ್ಟವೇ ಸರಿ.

teac
ಶಿಕ್ಷಕರ ಕೊರತೆಯ ನೆಪದಲ್ಲಿ ಶೋಷಣೆ:
ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಈ ಶಾಲೆಗಳಿಗೆ ಸರಕಾರ ಇದುವರೆಗೂ ಖಾಯಂ ಶಿಕ್ಷಕರನ್ನು ನಿಯೋಜಿಸಿಲ್ಲ. ಶಾಲಾ ಆಡಳಿತ ಮಂಡಳಿ ಶಿಕ್ಷಕರ ಕೊರತೆಯನ್ನು ನೀಗಿಸಲು ತಾತ್ಕಾಲಿಕ ನೆಲೆಗಟ್ಟಿನಲ್ಲಿ ಶಿಕ್ಷಕರನ್ನು ನಿಯೋಜಿಸುತ್ತದೆ. ಮುಖ್ಯವಾಗಿ ಅಂಥಾ ಶಿಕ್ಷಕರನ್ನು ನಿಯೋಜಿಸಲು ಬೇಕಾದರೂ ಡಿಎಡ್, ಬಿಎಡ್ ಕಲಿತ ಶಿಕ್ಷಕರನ್ನೇ ನಿಯೋಜಿಸಬೇಕು ಎಂಬ ನಿಯಮವಿದೆ. ಇದರಿಂದ ಶಿಕ್ಷಣ ಸಂಸ್ಥೆಗಳಿಗೆ ವರದಾನವಾಗಿದ್ದು, ಕಡಿಮೆ ಸಂಬಳಕ್ಕೆ ಶಿಕ್ಷಕರನ್ನು ನಿಯೋಜಿಸಲು ಕಾರಣವಾಗಿದೆ.
ತಾತ್ಕಾಲಿಕ ಶಿಕ್ಷಕರಾದರೂ ಡಿಎಡ್, ಬಿಎಡ್ ಆಗ್ಲೇಬೇಕು:
ಶಾಲೆಯಲ್ಲಿ ತಾತ್ಕಾಲಿಕ ಶಿಕ್ಷಕರನ್ನು ನಿಯೋಜಿಸಬೇಕಾದರೂ ಅವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಡಿಎಡ್ ಅಥವಾ ಬಿಎಡ್ ಕಲಿಯಲೇಬೇಕು. ಇಲ್ಲದಿದ್ದರೆ ಅವರನ್ನು ನೇಮಿಸುವಂತಿಲ್ಲ. ಖಾಯಂ ಶಿಕ್ಷರನ್ನು ನಿಯೋಜಿಸಬೇಕಾದರೆ ಶಿಕ್ಷಕರ ಆಯ್ಕೆಗೆ ಖಾಯಂ ಶಿಕ್ಷರನ್ನು ನಿಯೋಜಿಸಬೇಕಾದರೂ ಶಿಕ್ಷಕರ ಆಯ್ಕೆಗೆ ನಡೆಸಲಾದ ಸಾರ್ವಜನಿಕ ಪರೀಕ್ಷೆಯಲ್ಲಿ ಆಯ್ಕೆಯಾಗಬೇಕು. ಅಂಥ ಶಿಕ್ಷಕರನ್ನೇ ನಿಯೋಜಿಸಬೇಕೆಂದು ಎಸ್ಎಂಕೃಷ್ಣ ಸರಕಾರ ಸುತ್ತೋಲೆ ಹೊರಡಿಸಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳೂ ಸಹ ಈ ರೀತಿ ಆಯ್ಕೆಯಾದ ಶಿಕ್ಷಕರನ್ನೇ ನಿಯೋಜಿಸಬೇಕು ಅಲ್ಲದೆ ಇಂತಿಷ್ಟು ಸಂಬಳ ನೀಡಬೇಕೆಂದು ಸರಕಾರದ ಆದೇಶ ನೀಡಿತ್ತು. ಆದರೆ ಸರಕಾರ ನಿಗದಿಪಡಿಸಿದ ಸಂಬಳ ಕೊಡಲು ಶಿಕ್ಷಣಸಂಸ್ಥೆಗಳಿಗೆ ಸಾಧ್ಯವಾಗದಿರುವುದರಿಂದ ತಾತ್ಕಾಲಿಕವಾಗಿ ಶಿಕ್ಷಕರನ್ನು ನೇಮಿಸುತ್ತದೆ.
ಒಂದೂವರೆ ಸಾವಿರ ರೂ. ಸಂಬಳ ಅಂದ್ರೆ ನಂಬ್ತೀರಾ?
ತಾತ್ಕಾಲಿಕವಾಗಿ ಆಯ್ಕೆಯಾದ ಶಿಕ್ಷಕರಿಗೆ ಶಿಕ್ಷಣ ಸಂಸ್ಥೆಗಳು ನೀಡುವ ಸಂಬಳ ಎಷ್ಟೆಂದು ಕೇಳಿದರೆ ನೀವು ನಿಜವಾಗಿಯೂ ದಂಗಾಗಲೇಬೇಕು. ಏಕೆಂದರೆ ಅವರಿಗೆ ಕೊಡುವುದು ಕೇವಲ ತಿಂಗಳಿಗೆ ಒಂದೂವರೆ ಸಾವಿರದಿಂದ ಐದು ಸಾವಿರದವರೆಗಿನ ಸಂಬಳ ಮಾತ್ರ. ಈ ಸಂಬಳ ಆಕೆ ದಿನಕ್ಕೊಂದು ಉಡುವ ಸೀರೆ, ಮುಖಕ್ಕೆ ಹಾಕುವ ಮೇಕಪ್, ಲಿಪ್ಸ್ಟಿಕ್ಗೆ ಸಾಕಾಗದು. ಅಲ್ಲದೆ ಶಿಕ್ಷಕರೆಂದಾದ ಮೇಲೆ ಉತ್ತಮವಾದ ಉಡುಪು ಧರಿಸಬೇಕು ಎಂಬ ಸ್ವಘೋಷಿತ ನಿಯಮದಿಂದಾಗಿ ತಾತ್ಕಾಲಿಕ ಶಿಕ್ಷಕರು ಬವಣೆ ಪಡುವಂತಾಗಿದೆ.
ಅಲ್ಲದೆ ದಿನವಿಡೀ ಪಾಠ, ಸಾಂಸ್ಕೃತಿಕ ಕಾರ್ಯಕ್ರಮ, ಕಲಿ-ನಲಿ, ಆಟಪಾಠ ಎಂದೆಲ್ಲಾ ಶಿಕ್ಷಕರನ್ನು ದಿನವಿಡೀ ದುಡಿಸಲಾಗುತ್ತಿದೆ. ಅಲ್ಲದೆ ಖಾಯಂ ಶಿಕ್ಷಕರೂ ಕೂಡಾ ಇವರನ್ನು ಶೋಷಣೆ ಮಾಡುತ್ತಿರುವ ಬಗ್ಗೆಯೂ ವರದಿಯಾಗುತ್ತಿದೆ. ಕೆಲವು ಸರಕಾರಿ ಶಿಕ್ಷಕರು ಕೇವಲ ಹಾಜರಿ ಪುಸ್ತಕದಲ್ಲಿ ಸಹಿ ಹಾಕಲಷ್ಟೇ ಶಿಕ್ಷಕರು. ಅವರ ಸ್ಥಾನಕ್ಕೆ ತಾತ್ಕಾಲಿಕ ಶಿಕ್ಷಕರನ್ನು ನಿಯೋಜಿಸಿ ಅವರಿಗೆ ಮೂರುಕಾಸಿನ ಸಂಬಳ ನೀಡಿ ದಿನದೂಡುವ ಶಿಕ್ಷಕ ರೂಪಿ ರಕ್ಕಸರಿಗೆ ಕಮ್ಮಿ ಇಲ್ಲ.
ತಾತ್ಕಾಲಿಕ ಶಿಕ್ಷಕರ ಬವಣೆ ಕೇಳೋರ್ಯಾರು?
ಮುಖ್ಯವಾಗಿ ತಾತ್ಕಾಲಿಕ ಶಿಕ್ಷಕರು ಯಾವಾಗಬೇಕಾದರೂ ಕೆಲಸ ಬಿಡಬಹುದು. ಇವರಿಗೆ ಮುಂದೆ ಖಾಯಂ ಆಗಿ ಶಿಕ್ಷಕ ಹುದ್ದೆಯೂ ಸಿಗಬಹುದು. ಅದು ಪ್ರಶ್ನೆಯಲ್ಲ. ಆದರೆ ತಾತ್ಕಾಲಿಕವಾಗಿಯೇ ಹಲವಾರು ವರ್ಷ ದುಡಿಯುವ ಶಿಕ್ಷಕರಿದ್ದಾರೆ. ಅವರಿಗೆ ಸರಿಯಾದ ಸಂಬಾವಣೆ ಸಿಗುತ್ತಿಲ್ಲ. ಇಂಥವರ ಬದುಕಿನ ಬವಣೆ ಕೇಳಲು ಇದುವರೆಗೂ ಯಾರೂ ಬಂದಿಲ್ಲ. ಅಲ್ಲದೆ ತಾತ್ಕಾಲಿಕ ಶಿಕ್ಷಕರು ಅಸಂಘಟಿತವಾಗಿದ್ದಾರೆ.
ಅಲ್ಲದೆ ಸಾರ್ವಜನಿಕ ಪರೀಕ್ಷೆಯಲ್ಲಿ ಆಯ್ಕೆಯಾದ ಶಿಕ್ಷಕ ಅಭ್ಯರ್ಥಿಯನ್ನು ಸರಕಾರ ಹುದ್ದೆಗೆ ನೇಮಿಸಿಲ್ಲ. ಈಗಲೂ ಡಿಎಡ್, ಬಿಎಡ್ಗಳನ್ನು ಕಾಲೇಜ್ಗಳಲ್ಲಿ ಕಲಿಸಲಾಗುತ್ತಿದ್ದು, ಇದಕ್ಕೆ ಈಗಲೂ ಬಹುಬೇಡಿಕೆಯಿದೆ. ವರ್ಷದಿಂದ ವರ್ಷಕ್ಕೆ ಸಾವಿರಾರು ಮಂದಿ ಶಿಕ್ಷಣ ತರಬೇತಿ ಪಡೆದವರು ಹೊರಬರುತ್ತಾರೆ. ಇವರಿಗೆಲ್ಲಾ ಹುದ್ದೆ ನೀಡಲು ಸಾಧ್ಯವೇ? ಒಟ್ಟಾಗಿ ಈ ಎಲ್ಲಾ ಗೊಂದಲಗಳನ್ನು ನಿವಾರಿಸುವವರು ಯಾರೆಂಬುದೇ ಪ್ರಶ್ನೆ.

By suddi9

Leave a Reply

Your email address will not be published. Required fields are marked *