ಬಂಟ್ವಾಳಃ ಸೂರ್ಯ ಹೇಗೆ ಬೆಳಕು ನೀಡುತ್ತಾನೆ, ಭೂಮಿ ಮತ್ತಿತರ ಗೃಹಗಳು ಹೇಗೆ ಸೂರ್ಯನ ಸುತ್ತ ಸುತ್ತುತ್ತದೆ, ಗ್ರಹಣಗಳು ಹೇಗೆ ಸಂಭವಿಸುತ್ತದೆ, ಧೂಮಕೇತು, ಉಲ್ಕೆಗಳು ಹೇಗೆ ಅಪ್ಪಳಿಸುತ್ತವೆ, ಶನಿಗ್ರಹಕ್ಕೆ ಮಾತ್ರ ಯಾಕೆ ಉಂಗುರದ ರಚನೆಯಿದೆ ಹೀಗೆ ಸೌರ ಮಂಡಲದ ಅಚ್ಚರಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಕುತೂಹಲಗಳಿರುತ್ತದೆ. ಸೌರ ಮಂಡಲದಲ್ಲಿ ನಡೆಯುವ ಇಂತಹ ಅಧ್ಬುತಗಳನ್ನು, ಆಕಾಶಕಾಯಗಳ ಚಟುವಟಿಕೆಗಳನ್ನು ತಿಳಿದುಕೊಳ್ಳಲು ಮಣಿಪಾಲ ಅಥವಾ ಪಿಲಿಕುಳದ ತಾರಾಲಯಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದು ಪರಿಪಾಠವನ್ನು ಶಿಕ್ಷಕರು ಬೆಳೆಸಿಕೊಂಡಿದ್ದಾರೆ. ಸೌರಮಂಡಲದಲ್ಲಿ ನಡೆಯವ ಆಕಾಶಕಾಯಗಳ ಬಗ್ಗೆ ಪುಸ್ತಕ ಬಿಟ್ಟರೆ ತಾರಾಲಾಯದಲ್ಲಿ ನೋಡುವ ಅವಕಾಶ ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳು ಕೊರಗುವ ಅವಶ್ಯಕತೆಯಿಲ್ಲ. ಯಾಕೆಂದರೆ ಬಂಟ್ವಾಳ ತಾಲೂಕಿನಲ್ಲಿ ಸೌರಮಂಡಲದ ಅಚ್ಚರಿಗಳನ್ನು ಶಾಲೆ ಅಂಗಳದಲ್ಲಿಯೇ ವೀಕ್ಷಿಸುವ ಅವಕಾಶವನ್ನು ಪ್ರಾರಂಭಿಕ ಹಂತದಲ್ಲಿ ಒಂದುವಾರಗಳ ಕಾಲ ಬಂಟ್ವಾಳ ರೋಟರಿ ಕ್ಲಬ್ ಮಾಡಲಿದೆ.
ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಬಂಟ್ವಾಳ ರೋಟರಿ ಕ್ಲಬ್ನ ಅಧ್ಯಕ್ಷ ಮಂಜುನಾಥ ಆಚಾರ್ಯ ಮತ್ತವರ ತಂಡ ಈ ಪ್ರಯತ್ನಕ್ಕೆ ಮುಂದಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರದರ್ಶನ ನೀಡಿರುವ ತ್ರಿಡಿ ತಾರಾಯಲ ಬಂಟ್ವಾಳ ರೋಟರಿಕ್ಲಬ್ನ ಮುತವರ್ಜಿಯಲ್ಲಿ ಇದೀಗ ದ.ಕ. ಜಿಲ್ಲೆಯಲ್ಲಿಯೂ ಪ್ರದರ್ಶನಕ್ಕೆ ಸಜ್ಜಾಗಿದ್ದು ಬಂಟ್ವಾಳ ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ಸೌರಮಂಡಲದ ಕುರಿತು ಪರಿಚಯ ನೀಡಲಿದೆ. ಸೆ. 17 ರಿಂದ ಸೌರಮಂಡಲದ ವೀಕ್ಷಣೆ ಚಾಲನೆ ಪಡೆದು ಕೊಳ್ಳಲಿದೆ.

ಬ್ರಹ್ಮಾಂಡ ವೀಕ್ಷಣೆ:
ಏಕಕಾಲದಲ್ಲಿ 40 ಮಂದಿ ವಿದ್ಯಾರ್ಥಿಗಳು ತಾರಾಲಯದಲ್ಲಿ ಕುಳಿತು ಬ್ರಹ್ಮಾಂಡ ದರ್ಶನ ಮಾಡಬಹುದಾಗಿದೆ. ಎಲ್ಕೆಜಿಯಿಂದ ದ್ವಿತೀಯ ಪಿಯೂಸಿವರೆಗಿನ ವಿದ್ಯಾರ್ಥಿಗಳು ಶಾಲಾ ಅಂಗಳದಲ್ಲೇ ಕುಳಿತು ನಭದಲ್ಲಿ ನಡೆಯುವ ವಿಸ್ಮಯವನ್ನು ಪ್ಲಾನಿಟೋರಿಯಂನಲ್ಲಿ ಆಸ್ವಾಧಿಬಹುದಾಗಿದೆ. ಸೌರಮಂಡಲದಲ್ಲಿರುವ ಸೂರ್ಯ, ಚಂದ್ರ, ನಕ್ಷತ್ರ, ಗ್ರಹ, ಧೂಮಕೇತು, ನಕ್ಷತ್ರ ಪುಂಜ ಮತ್ತಿತರ ಆಕಾಶಕಾಯಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬಹುದಾಗಿದೆ. ಸೌರವ್ಯೂಹದ ಉಗಮ, ಬಾಹ್ಯಕಾಶಗಳ ಮಾಹಿತಿ ಸೇರಿದಂತೆ ಖಗೋಳ ವಿಜ್ಞಾನದ ವಿಸ್ಮಯಗಳನನು ತ್ರಿಡಿ ತಂತ್ರಜ್ಞಾನದ ಮೂಲಕ ಈ ವಿಶಿಷ್ಠ ಪ್ಲಾನಿಟೋರಿಯಮ್ನಲ್ಲಿ ವೀಕ್ಷಿಸಿ ತಿಳಿದುಕೊಳ್ಳಬಹುದಾಗಿದೆ.
ಸೆ.17ರಂದು ಉದ್ಘಾಟನೆ:
ಸೆ.17ರಂದು ಪಾಣೆಮಂಗಳೂರಿನ ಶಾರಾದ ಪ್ರೌಢಶಾಲೆಯಲ್ಲಿ ರೋಟರಿಯ ತ್ರಿಡಿ ತಾರಾಲಯ ಆರಂಭಗೊಳ್ಳಲಿದೆ. ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿ ಉದ್ಘಾಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ತಹಶೀಲ್ದಾರ್ ಪುರಂದರ ಹೆಗ್ಡೆ, ರೋಟರಿ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ, ರೋಟರಿ ಸುವಣ್ ವರ್ಷಾಚರಣೆ ಸಮಿತಿ ಸಂಚಾಲಕ ಡಾ. ರಮೇಶಾನಂದ ಸೋಮಯಜಿ ಸೇರಿದಂತೆ ರೋಟರಿ ಕ್ಲಬ್ನ ಗಣ್ಯರು ಭಾಗವಹಿಸಲಿದ್ದಾರೆ.
ರೋಟರಿ ಕ್ಲಬ್ನ ವಿಶಿಷ್ಠ ಕೊಡುಗೆ:
ಸುವರ್ಣ ವರ್ಷಾಚರಣೆ ಮಾಡುತ್ತಿರುವ ಬಂಟ್ವಾಳದ ರೋಟರಿ ಕ್ಲಬ್ನ ಅಧ್ಯಕ್ಷ ಮಂಜುನಾಥ ಆಚಾರ್ಯ ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಈಗಾಗಲೇ ಕಾರ್ಯಗತಗೊಳಿಸಿದ್ದಾರೆ. ಆ ಪೈಕಿ ಅತ್ಯಂತ ವಿಶಿಷ್ಠವಾದುದು ಶಾಲಾ ಅಂಗಣದಲ್ಲಿ ತಾರಾಲಯ ವೀಕ್ಷಣೆ. ಮನೋರಂಜನೆಯೊಂದಿಗೆ ಶಿಕ್ಷಣ ನೀಡಬೇಕು, ಪುಸ್ತಕದಲ್ಲಿ ಓದಿ ತಿಳಿದುಕೊಳ್ಳುವುದಕ್ಕಿಂತ, ಸ್ವತಃ ಅವುಗಳನ್ನು ನೋಡಿ ಅನುಭವಿಸಿದರೆ ವಿದ್ಯಾರ್ಥಿಗಳ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎನ್ನುವ ಉದ್ದೇಶವನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ಪ್ರದರ್ಶನ ನೀಡುತ್ತಿದ್ದ ದುಬಾರಿ ವೆಚ್ಚದ ತ್ರಿಡಿ ತಾರಾಲಯವನ್ನು ಬಂಟ್ವಾಳಕ್ಕೆ ಕರೆಸಿಕೊಂಡಿದ್ದಾರೆ. ಸೆ.17ರಿಂದ ಸೆ. 24ರವರೆಗೆ ಬಂಟ್ವಾಳ ತಾಲೂಕಿನ ಶಾಲೆಗಳಲ್ಲಿ ಪ್ರದರ್ಶನ ನೀಡಲಿದೆ. ಶಾಲಾ ರಜಾದಿನಗಳಾಗಿರುವ ಸೆ.21 ಹಾಗೂ ಸೆ.23ರಂದು ಬಿ.ಸಿ.ರೋಡಿನ ರೋಟರಿ ಸಭಾಭವನದಲ್ಲಿ ಸೌರಮಂಡಲ ವೀಕ್ಷಣೆಗೆ ಅವಕಾಶ ಕಲ್ಪಿಪಿಸಲಾಗಿದೆ. ಶಾಲೆಗಳಲ್ಲಿ ಪ್ರದರ್ಶನಕ್ಕೆ ಮಾಡಲು ಬಯಸುವವರು ದೂರವಾಣಿ ಸಂಖ್ಯೆ 9740243751ನ್ನು ಸಂಪರ್ಕಿಸುವಂತೆ ಕೋರಲಾಗಿದೆ. ರೋಟರಿ ಕ್ಲಬ್ಗಳು ಸೆಪ್ಟೆಂಬರ್ ತಿಂಗಳನ್ನು ಮೂಲಭೂತ ಶಿಕ್ಷಣ ಹಾಗೂ ಸಾಕ್ಷರತಾ ತಿಂಗಳನ್ನಾಘಿ ಆಚರಿಸುತ್ತಿದೆ. ಅದಕ್ಕೆ ಪೂರಕವಾಗಿ ವಿಭಿನ್ನ ಕಲ್ಪನೆ ಎನ್ನುವಂತೆ ಶಾಲಾ ಅಂಗಣದಲ್ಲಿ ಬ್ರಹ್ಮಾಂಡ ದರ್ಶನವೂ ವಿಶಿಷ್ಟವಾಗಿ ಮೂಡಿ ಬರಲಿದೆ.
