ಗುರುಪುರ : ಧರ್ಮಸ್ಥಳಕ್ಕೆ ಹತ್ತಿರದ ನೆಲ್ಯಾಡಿಯ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಂನಲ್ಲಿ ಸೆಪ್ಟೆಂಬರ್ 3ರಂದು ನಡೆಯಲಿರುವ `ಧರ್ಮ ಸಂಸತ್’ ಪ್ರಯುಕ್ತ ಭಾನುವಾರ(ಜುಲೈ 22) ಗುರುಪುರ ಕುಕ್ಕದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

gur-july-22-swamy speaking
ಸನಾತನ ಹಿಂದೂ ಧರ್ಮ ಗಟ್ಟಿಯಾದರೆ ಮಾತ್ರ ಈ ಸಮಾಜ ಗಟ್ಟಿಯಾಗಲು ಸಾಧ್ಯವಿದೆ. ಸಮಾಜವೆಂಬುದು ವಿಶಾಲ ಸಮುದ್ರದಂತಿದ್ದು, ಅದರಲ್ಲಿ ಸಂತರೆಂಬ ಮೀನುಗಳು ಇದ್ದರೆ ಮಾತ್ರ ನೀರು ಪರಿಶುದ್ಧವಾಗಲಿದೆ. ಅಂದರೆ, ಸಮಾಜ ಪರಿಶುದ್ಧವಾಗಲಿದೆ. ಧರ್ಮ ಸಂಸತ್ ಮೂಲಕ ದೇಶದಲ್ಲಿ `ಲೋಕ ಕಲ್ಯಾಣ ಮಂಚ್’ ಸ್ಥಾಪನೆ ಗುರಿ ಉತ್ತಮವಾಗಿದೆ. ಇದು ಹಿಂದೂ ಸಮಾಜದ ಇಂದಿನ ಅಗತ್ಯವೂ ಹೌದು ಎಂದು ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಅಭಿಪ್ರಾಯಪಟ್ಟರು.
ಧರ್ಮ ಸಂಸ್ಕಾರ, ಸಂಸ್ಕøತಿ, ಪರಂಪರೆ ಮರೆತರೆ ನಮಗೆ ಅಸ್ತಿತ್ವವೇ ಇಲ್ಲ. ಶಾಲಾ-ಕಾಲೇಜು ಪಠ್ಯದಲ್ಲಿ ನಮ್ಮ ಸನಾತನ ಧರ್ಮ ಸಾರುವ ವೇದ, ಉಪನಿಷತ್ತುಗಳ ಧರ್ಮಸಾರ ವಿಷಯಗಳು ಸೇರ್ಪಡೆಯಾಗಬೇಕೆಂಬ ಧರ್ಮ ಸಂಸತ್ತಿನ ಉದ್ದೇಶ ಮಹತ್ವದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಧರ್ಮ ಸಂಸತಿನ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಸಂಚಾಲಕ ಸತ್ಯಜಿತ್ ಸುರತ್ಕಲ್ ಮಾತನಾಡುತ್ತ, ಈ ಧರ್ಮ ಸಂಸತ್ತಿನಲ್ಲಿ ದೂರಗಾಮಿ ದೃಷ್ಟಿಕೋನ ಅಡಕವಾಗಿದೆ. ರಾಮಾಯಣ, ಮಹಾಭಾರತ, ವೇದ, ಉಪನಿಷತ್ತುಗಳು ಕಲಿತರೆ ಸಾಲದು, ಅದನ್ನು ವ್ಯಕ್ತಿಗತವಾಗಿ ಮೈಗೂಡಿಸಿಕೊಂಡು ದೇಶದ ಹಿಂದೂ ಸಂಸ್ಕøತಿಯ ಉದ್ಧಾರ ಮಾಡುವಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ವ್ಯವಸ್ಥಿತ ಸಮಾಜ ನಿರ್ಮಾಣಕ್ಕಾಗಿ ಈಗಿನ ಅವ್ಯವಸ್ಥಿತ ಜೀವನ ಶೈಲಿ ಬದಲಿಸಿಕೊಳ್ಳಬೇಕು. ಜಗತ್ತಿಗೆ ಶಾಂತಿಮಂತ್ರ ಬೋಧಿಸಿದ ಭಾರತ ಮುಂದೆಯೂ ಭಾರತವಾಗಿ ಉಳಿಯಬೇಕಿದ್ದರೆ ಸನಾತನ ಧರ್ಮ ಇನ್ನಷ್ಟು ಬಲಿಷ್ಠಗೊಳ್ಳಬೇಕು ಎಂದರು.
ಧಾರ್ಮಿಕ ದತ್ತಿ ಪರಿಷತ್ತಿನ ಸದಸ್ಯ ಪದ್ಮನಾಭ ಕೋಟ್ಯಾನ್ ಮತ್ತು ಉದ್ಯಮಿ ದೀಪಕ್ ಕೋಟ್ಯಾನ್ ಸಂದರ್ಭೋಚಿತ ಮಾತಾಡಿ, ಕನ್ಯಾಡಿ ಧರ್ಮ ಸಂಸತ್ತಿಗೆ ಈ ಭಾಗದಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಧರ್ಮ ಸಂಸತ್ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕಲ್ಲಡ್ಕ ಧರ್ಮ ಸಂಸತಿನ ಉದ್ದೇಶ ವಿವರಿಸಿದರು. ವೇದಿಕೆಯಲ್ಲಿ ಕಾಂತಪ್ಪ ಪೂಜಾರಿ ವಾಮಂಜೂರು, ರಾಜೇಶ್ ಕೊಟ್ಟಾರಿ, ವೀರಪ್ಪ ಪೂಜಾರಿ ಮೂಡುಶೆಡ್ಡೆ, ಜಯಂತಿ ವಾಮಂಜೂರು ಮೊದಲಾದವರಿದ್ದರು. ಜನಾರ್ದನ ಸುವರ್ಣ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರೆ, ತಿರುವೈಲುಗುತ್ತು ರಾಜಕುಮಾರ್ ಶೆಟ್ಟಿ ವಂದನಾರ್ಪಣೆಗೈದರು.

By Suddi9

Leave a Reply

Your email address will not be published. Required fields are marked *