40 ವರ್ಷಗಳಿಂದ ಗೂಡಿನಲ್ಲಿ ಏಕಾಂಗಿ ಜೀವನ ನಡೆಸುತ್ತಿರುವ ಸರಸಜ್ಜಿ!
ಬ್ರಹ್ಮಾವರ: ಒಂದು ಕ್ಷಣ ಮೊಬೈಲ್, ವಿದ್ಯುತ್ ಇಲ್ಲದಿದ್ದರೆ ಚಡಪಡಿಸುವ ಇಂದಿನ ದಿನಗಳಲ್ಲಿ ಕಳೆದ 40 ವರ್ಷಗಳಿಂದ 85 ವಯಸ್ಸಿನ ಅಜ್ಜಿಯೊಬ್ಬರು ಯಾವುದೇ ಸೌಕರ್ಯ, ಅನುಕೂಲಗಳಿಲ್ಲದೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಕರ್ಜೆ ಗ್ರಾ.ಪಂ. ವ್ಯಾಪ್ತಿಯ ಕಡಂಗೋಡು ಸಮೀಪ ಸರಸಜ್ಜಿ ಮಣ್ಣಿನ ಮುರುಕಲು ಗೂಡಿನಲ್ಲಿ ವಾಸಿಸುತ್ತಿದ್ದಾರೆ. ಸರಸಜ್ಜಿಯ ಪತಿ ತೀರಿಕೊಂಡು ಹಲವು ವರ್ಷಗಳೇ ಕಳೆದಿವೆ. ಮಗಳು ಮೃತಪಟ್ಟಿದ್ದಾಳೆ. ಇದ್ದ ಓರ್ವ ಮಗನ ಜತೆಯೂ ಅವರು ವಾಸವಿಲ್ಲ.
ಸರಸಜ್ಜಿ ವಾಸವಿರುವುದು ರಾಜ್ಯದ ಏಕೈಕ ಮಣ್ಣಿನ ಅರಮನೆ ಖ್ಯಾತಿಯ ಸೂರಾಲು ಸನಿಹದ ಪುಟ್ಟ ಗುಡಿಸಲಿನಲ್ಲಿ. ಇದು ಅಕ್ಷರಶಃ ಕೋಳಿಗೂಡಿನಂತಿದೆ. ಅಜ್ಜಿ ಸ್ವತಃ ಕೈಯಾರೆ ಮಣ್ಣು ಕಲಸಿ ಇದನ್ನು ಕಟ್ಟಿದ್ದಾರೆ. ಮಾಡಿಗೆ ಮಡಲು, ಟಾರ್ಪಾಲಿನ್ ಹಾಕಿಕೊಂಡಿದ್ದಾರೆ. ಮಳೆಗಾಲದಲ್ಲಿ ಇದಕ್ಕೆ ನೀರು ನುಗ್ಗುತ್ತದೆ. ಇತ್ತೀಚೆಗೆ ಭಾರೀ ಮಳೆಗೆ ಇದ್ದ ಅಕ್ಕಿ ಚೀಲವೂ ಒದ್ದೆಯಾಗಿದೆ.
ಇಷ್ಟಾದರೂ ಅಜ್ಜಿ ಇನ್ನೊಬ್ಬರನ್ನು ನಂಬಿಕೊಂಡಿಲ್ಲ. ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಸುಮಾರು 85ರ ವಯಸ್ಸಿನಲ್ಲೂ ಸರಸರನೆ ನಡೆದಾಡುತ್ತಾರೆ. ಮನೆ-ಪರಿಸರ ಸ್ವಚ್ಚತೆಯಲ್ಲಿ ಜನಸಾಮಾನ್ಯರಿಗೆ ಮಾದರಿಯಾಗಿದ್ದಾರೆ.
ಅಜ್ಜಿಯ ಮನೆಗೆ ವಿದ್ಯುತ್ ಇಲ್ಲ. ಯಾವುದೇ ಆಧುನಿಕ ಸೌಲಭ್ಯಗಳಿಲ್ಲ. ಕನಿಷ್ಠ ಪಕ್ಷ ಸೀಮೆ ಎಣ್ಣೆ ಇಲ್ಲದೆ ದೀಪವೂ ಉರಿಯುತ್ತಿಲ್ಲ. ಅತೀ ಆವಶ್ಯಕ ಪಾತ್ರೆಗಳು, ದಿನಸಿ ಸಾಮಾಗ್ರಿಗಳು ಮಾತ್ರ. ಇನ್ನು ಪಡಿತರ ಚೀಟಿ, ಆಶ್ರಯ ಮನೆ, ಸಂಧ್ಯಾ ಸುರಕ್ಷಾ ಇತ್ಯಾದಿ ಸೌಲಭ್ಯಗಳ ಗೋಜಿಗೇ ಹೋಗಲಿಲ್ಲ. ಸರಸಜ್ಜಿ ನಿರ್ಗತಿಕಳಲ್ಲ. ಗುಡಿಸಲು ಹಾಗೂ ಸುತ್ತಲಿನ ಪರಿಸರ ಸೇರಿ 1 ಎಕ್ರೆ ಮಿಕ್ಕಿದ ಜಾಗ ಆಕೆಯ ಹೆಸರಿನಲ್ಲಿದೆ ಎನ್ನಲಾಗಿದೆ.
ಅಜ್ಜಿಯು ಮನೆ ಸುತ್ತಮುತ್ತಲಿನ ಗೇರುಮರಗಳಿಂದ ಗೇರು ಬೀಜ ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದಾರೆ. ಮನೆ ಖರ್ಚಿಗೆ ಒಂದಷ್ಟು ತರಕಾರಿಯನ್ನೂ ಬೆಳೆಯುತ್ತಾರೆ. ಆದರೆ ಜನರೊಂದಿಗೆ ಯಾವುದೇ ಒಡನಾಟವಿಲ್ಲದೆ ಏಕಾಂಗಿಯಾಗಿ ಬದುಕುತ್ತಿದ್ದಾರೆ.
ಸರಸಜ್ಜಿಯ ಗುಡಿಸಲಿಗೆ ಭೇಟಿ ನೀಡಿದ್ದೇನೆ. ಅವರು ಯಾವುದೇ ಕಚೇರಿಗೆ ಬರಲು ಒಪ್ಪದ ಕಾರಣ ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್‌ಗಾಗಿ ಮನೆಗೆ ಹೋಗಿ ಸಹಿ ತೆಗೆದುಕೊಳ್ಳುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಅಜ್ಜಿಯ ಒಪ್ಪಿಗೆಯಂತೆ ಸಮೀಪದಲ್ಲೇ ವೈಯಕ್ತಿಕ ಹಾಗೂ ಕಾರ್ಯಕರ್ತರ ಸಹಕಾರದಿಂದ ಮನೆ ನಿರ್ಮಿಸುತ್ತೇವೆ.
– ಕೆ.ರಘುಪತಿ ಭಟ್, ಉಡುಪಿ ಶಾಸಕ