Published On: Wed, Jun 6th, 2018

ಈ ಬಾಲಕಿ ವಿಕಲಚೇತನೆಯಾದರೂ ಸಾಧನೆಯಲ್ಲಿ ಮುಂಚೂಣಿ!

yashaswi-2

ಬಂಟ್ವಾಳ: ಎಲ್ಲರಂತಲ್ಲ ಈಕೆ. ಆದರೆ ಎಲ್ಲರನ್ನೂ ಗೆದ್ದಾಕೆ. ವಿಕಲಚೇತನೆಯಾದರೂ ಈಗ ವಿಶ್ವಚೇತನೆಯಾಗುವತ್ತ ಹೆಜ್ಜೆ ಇಡುತ್ತಿರುವ ವಿಶೇಷ ಪ್ರತಿಭೆ. ಹೌದು.ಇದು ಸಾಧನೆಯ ಪಥದಲ್ಲೇ ಸಾಗಿಬಂದ ಯಶಸ್ವಿಯ ಯಶೋಗಾಥೆ.

ಆ ಬಾಲಕಿಯನ್ನು ನೋಡಿದಾಕ್ಷಣ ಯಾರೂ ಹೇಳಲಾರರು ಅವಳಿಗೆ ಕಿವಿಕೇಳಿಸದು, ಮಾತೂ ಬಾರದೆಂದು. ಮನಸ್ಸಿನ ಒಳಗೆ ಸಂಕಟದ ಅಳುಕಿದ್ದರೂ, ಆಕೆಯ ಮುಗ್ಧ ಹಾಗೂ ಆತ್ಮೀಯ ನಗೆ ಎಲ್ಲವನ್ನೂ ಮೀರಿ ನಿಂತಿದೆ.

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದುಮಾನು ಎಂಬಲ್ಲಿನ ಕೃಷಿಕರ ಕುಟುಂಬದಲ್ಲಿ ಬೆಳೆದ ತಿಮ್ಮಪ್ಪ ಮೂಲ್ಯ ಹಾಗೂ ಯಶೋಧ ದಂಪತಿಯ ದ್ವಿತೀಯ ಪುತ್ರಿ ಯಶಸ್ವಿ.ಕೆ. ಎಲ್ಲಾ ಮಕ್ಕಳಂತೆ ಚೂಟಿಯಾಗಿಯೇ ಬೆಳೆದ ಯಶಸ್ವಿಗೆ ಎರಡು ವರ್ಷ ತುಂಬುತ್ತಿದ್ದಂತೆಯೇ, ಹಿರಿಮಗಳು ಯತಿಶ್ರೀ ಯಂತೆಯೇ, ಯಶಸ್ವಿಗೂ ವಾಕ್ ಮತ್ತು ಶ್ರವಣ ಸಮಸ್ಯೆ ಇರುವುದು ಗೊತ್ತಾಯಿತು.ಆದರೂ ಹೆತ್ತವರು ಧೃತಿಗೆಡಲಿಲ್ಲ.

ಕಾರ್ಲ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾಯಿ ಯಶೋಧಾ, ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಪ್ರಯೋಗಾಲಯದಲ್ಲಿ ಸಹಾಯಕರಾಗಿರುವ ತಂದೆ ತಿಮ್ಮಪ್ಪ ಮೂಲ್ಯರು, ಮಕ್ಕಳ ಎಲ್ಲಾ ಹಂಬಲಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಇಬ್ಬರು ಮಕ್ಕಳನ್ನೂ ವಿಕಲಚೇತನರು ಎಂದುಗ್ರಹಿಸದೆ ಎಲ್ಲರ ಜೊತೆ ಮುಖ್ಯವಾಹಿನಿಯಲ್ಲೇ ಬೆಳೆಸಿದ ಪರಿಣಾಮವೇ ಇದೀಗ ಇಬ್ಬರು ಪುತ್ರಿಯರೂ ಪ್ರತಿಭಾನ್ವಿತರಾಗಿ ಗುರುತಿಸಿಕೊಂಡಿದ್ದಾರೆ.

ಯಶಸ್ವಿಗೆ ಅಕ್ಕನಿಗಿಂತಲೂ ದೋಷದ ಪ್ರಮಾಣ ಸ್ವಲ್ಪ ಹೆಚ್ಚು. ಯಶಸ್ವಿಯನ್ನು ಶ್ರವಣ ದೋಷ ಮುಕ್ತ ಶಿಬಿರಗಳಿಗೂ ಕಳುಹಿಸಿದರು. ಐದು ವರ್ಷ ತುಂಬಿದ ಬಾಲಕಿಯ ಭವಿಷ್ಯ ರೂಪಿಸಲು ಗಡಿಯಾರ ಸರ್ಕಾರಿ ಶಾಲೆಗೆ ಸೇರಿಸಿದರು. ಕಿವಿಗೆ ಶ್ರವಣ ಸಾಧನವನ್ನು ಅಳವಡಿಸಿಕೊಂಡು ಹೇಳಿದ್ದನ್ನು ಗ್ರಹಿಸಬಲ್ಲ ಈಕೆ ಬಾಲ್ಯದಿಂದಲೂ ತನ್ನ ವಿಕಲತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಚಿತ್ರಕಲೆ,ನೃತ್ಯ, ಭರತನಾಟ್ಯ, ಚದುರಂಗ, ಛದ್ಮವೇಷ, ಕರಕುಶಲ ಕಲೆ, ಕ್ಲೇ ಮಾಡೆಲಿಂಗ್ ಹೀಗೆ ಹಲವಾರು ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ಬೇಷ್ ಎನಿಸಿಕೊಂಡಳು ಬಾಲಕಿ ಯಶಸ್ವಿ.

ಪ್ರತಿಭಾ ಕಾರಂಜಿಯಿರಲಿ, ತಾಲೂಕು ಜಿಲ್ಲಾ ಮಟ್ಟದ ಯಾವುದೇ ಸ್ಪರ್ಧೆ ಇರಲಿ ಯಶಸ್ವಿಗೆ ಯಶಸ್ಸು ಗ್ಯಾರಂಟಿ. ಈಕೆ ಭರತನಾಟ್ಯವನ್ನು ವಿದ್ವಾನ್ ದೀಪಕ್ ಕುಮಾರ್ ಅವರಲ್ಲಿ ಅಭ್ಯಾಸ ಮಾಡಿ, ಜ್ಯೂನಿಯರ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿದ್ದು, ಇದೀಗ ನೃತ್ಯ ವಿಧುಷಿ ಶಾಲಿನಿ ಆತ್ಮಭೂಷಣ್ ರವರಲ್ಲಿ ಭರತನಾಟ್ಯ ಅಭ್ಯಾಸವನ್ನು ಮುಂದುವರಿಸಿದ್ದಾಳೆ.

ಚಿತ್ರಕಲೆಯ ಲೋವರ್ ಗ್ರೇಡ್ ಪರೀಕ್ಷೆಯಲ್ಲೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವ ಈಕೆ ಚಿತ್ರಕಲೆಯಲ್ಲೂ ತಾನು ಯಶಸ್ವಿ ಎಂದು ತೋರಿಸಿಕೊಟ್ಟಿದ್ದಾಳೆ.

ಕಲಿಕೆಯಲ್ಲಿಯೂ ಹಿಂದೆ ಬೀಳದೆ, ಪ್ರತೀ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಇದೀಗ ಕಡೇಶಿವಾಲಯದ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾಳೆ. ಆದರೆ ಮನೆಮಂದಿಯ ತುಂಬು ಪ್ರೋತ್ಸಾಹದ ನಡುವೆ, ಅಂಗವೈಕಲ್ಯವನ್ನೇ ಮರೆತು.. ಮಾದರಿಯಾಗಿ ಮುನ್ನಡೆಯುತ್ತಿರುವ ಯಶಸ್ವಿ ಚದುರಂಗದಾಟದಲ್ಲಿ ಚತುರೆಯಾಗಿ ಅಂತರ್ರಾಷ್ಟ್ರೀಯ ಮಟ್ಟದ ಸಾಧನೆಗಾಗಿ ಇಂಗ್ಲೇಡ್ ನತ್ತ ಹೊರಟು ನಿಂತಿದ್ದಾಳೆ.

yashaswi-5

ಪುತ್ತೂರಿನ ಜೀನಿಯಸ್ ಚೆಸ್ ಸ್ಕೂಲ್ ನ ನಿರ್ದೇಶಕ ಸತ್ಯಪ್ರಸಾದ್ ಕೋಟೆ ಹಾಘೂ ಆಶಾಕಾವೇರಿ ದಂಪತಿಗಳ ಗರಡಿಯಲ್ಲಿ ಪಳಗಿರುವ ಈಕೆತನ್ನೆಲ್ಲಾ ನೂನ್ಯತೆಗಳನ್ನು ಮರೆತು ಚದುರಂಗದಾಟದಲ್ಲಿ ಮೆರೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಬಾಲ್ಯದಿಂದಲೂ ಚೆಸ್ ಆಟದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಯಶಸ್ವಿಗೆ ತಾಯಿ ಯಶೋಧಾ ಹಾಗೂ ತಂದೆ ತಿಮ್ಮಪ್ಪ ರ ಬೆಂಬಲ ಮತ್ತಷ್ಟು ಉತ್ತೇಜನ ನೀಡಿತು. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ, ಸಾಮಾನ್ಯ ಮಕ್ಕಳ ಚೆಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದವಳು ಈಕೆ.

2016- 17ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಆಯ್ಕೆಯಾಗಿ, ಕೇರಳದ ತ್ರಿಶೂರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಶ್ರವಣ ದೋಷ ಮಕ್ಕಳ ಚೆಸ್ ಪಂದ್ಯಾಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪ್ರಥಮ ಬಹುಮಾನ ಗಳಿಸಿದ್ದಳು. ಕಳೆದ ನವೆಂಬರ್ ನಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆ ಹಾಗೂ ಡಿಸೆಂಬರ್ ನಲ್ಲಿ ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರಕಿದ್ದು, ಮುಂದಿನ ಜುಲೈ ತಿಂಗಳಿನಲ್ಲಿ ಇಂಗ್ಲೇಂಡ್ ನ ಮ್ಯಾಂಚೆಸ್ಟರ್ ನಲ್ಲಿ ನಡೆಯಲಿರುವ ಅಂತಾರ್ರಾಷ್ಟ್ರೀಯ ಮಟ್ಟದ ಶ್ರವಣ ದೋಷ ಮಕ್ಕಳ ಚೆಸ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾಳೆ.

ಯಶಸ್ವಿಯ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಆಕೆಯನ್ನು ಗೌರವಿಸಿದ್ದು, ಮನೆಮಂದಿಯ ಜತೆಗೆ ಈಕೆ ಕಲಿಯುತ್ತಿರುವ ಶಾಲಾ ಶಿಕ್ಷಕರೂ ಕೂಡ ಈಕೆಗೆ ಬೆಂಬಲವಾಗಿ ನಿಂತಿರುವುದು ಆಕೆಯ ಕ್ರಿಯಾಶೀಲತೆಗೆ ಮತ್ತಷ್ಟು ಪ್ರೇರಣೆ ನೀಡಿದೆ.

ಎಲ್ಲವೂ ಇದ್ದು,ಎಲ್ಲರೂ ಇದ್ದು ಏನಿಲ್ಲ ಎಂದು ಕೊರಗುವವರ ನಡುವೆ ವೈಕಲ್ಯಗಳ ನಡುವೆಯೂ ಗೆಲ್ಲುವ ಯಶಸ್ವಿ ಯಂತಹ ಛಲವಂತ ಮಕ್ಕಳು ಮಾದರಿಯಾಗಿ ನಿಲ್ಲುತ್ತಾರೆ.

yashaswi-4

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter