ಮಂಗಳೂರು: ವಿದ್ಯಾರ್ಥಿನಿಗಳಾದ ಝೈಬುನ್ನಿಸಾ ಹಾಗೂ ರಚನಾಳ ಅಸಹಜ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿತು.
ಈ ವೇಳೆ ಧರಣಿನಿರತರರನ್ನು ಉದ್ದೇಶಿಸಿ ಮಾತನಾಡಿದ ಸಿಎಫ್ ಐ ಜಿಲ್ಲಾಧ್ಯಕ್ಷ ಅತುವುಲ್ಲಾ ಪುಂಜಲಕಟ್ಟೆ, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಅಲ್ಪಸಂಖ್ಯಾತ ಮಾದರಿ ಶಾಲೆಯ ವಿದ್ಯಾರ್ಥಿನಿ ಝೈಬುನ್ನಿಸಾ ಹಾಗೂ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ರಚನಾ ಆತ್ಮಹತ್ಯೆ ಪ್ರಕರಣ ತೀರಾ ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದು, ಆದ್ದರಿಂದ ಶಾಲಾ-ಕಾಲೇಜಿನ ಆಡಳಿತ ಮಂಡಳಿಯನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ಆಡಳಿತ ಮಂಡಳಿಯ ನಿರ್ಲಕ್ಷದಿಂದ ಬಲಿಯಾಗಿರುವ ಇಬ್ಬರು ವಿದ್ಯಾರ್ಥಿಗಳ ಕುಟುಂಬಕ್ಕೆ ರಾಜ್ಯ ಸರಕಾರ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ದೇ ವೇಳೆ ಅವರು ಒತ್ತಾಯಿಸಿದರು.
ಧರಣಿಯಲ್ಲಿ ಸಿಎಫ್ಐ ರಾಜ್ಯಾಧ್ಯಕ್ಷ ಮೊಹಮ್ಮದ್ ತಫ್ಸೀರ್, ಸಿಎಫ್ಐ ಕಾರ್ಯದರ್ಶಿ ಫರಾಝ್, ರೋಸಾರಿಯೋ, ಬದ್ರಿಯಾ ಹಾಗೂ ಕೊಲಸೋ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.



