ಮಂಗಳೂರು: ನಗರದಲ್ಲಿ ಇತ್ತೀಚೆಗೆ ದೀಪಕ್ ಹಾಗೂ ಬಶೀರ್ ದುಷ್ಕರ್ಮಿಗಳಿಂದ ಹತ್ಯೆಯಾದ ಸಂದರ್ಭದಲ್ಲಿ ಮಾನವೀಯತೆಗೆ ಹೊಸ ಲೇಪನ ಹಚ್ಚಿದ ಕೀರ್ತಿಗೆ ಪಾತ್ರರಾದ ಅಬ್ದುಲ್ ಮಜೀದ್ ಹಾಗೂ ಚಾಲಕ ಶೇಖರ್ ಕುಲಾಲ್ ಅವರನ್ನು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಜ. 3 ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕಾಟಿಪಳ್ಳದ ದೀಪಕ್ ರಾವ್ ಹಾಗೂ ಕೊಟ್ಟಾರ ಚೌಕಿ ಬಳಿ ಹತ್ಯೆಗೀಡಾದ ಬಶೀರ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾದ ಅಬ್ದುಲ್ ಮಜೀದ್ ಹಾಗೂ ಚಾಲಕ ಶೇಖರ್ ಕುಲಾಲ್ ಅವರಿಗೆ ಗುಲ್ಬರ್ಗಾದ ವಕೀಲ ಪಿ. ವಿಲಾಸ್ ಕುಮಾರ್ ಅವರು ಅಭಿನಂದಿಸುವಂತೆ ದ.ಕ. ಜಿಲ್ಲಾಡಳಿತಕ್ಕೆ ಮನವಿ ಮಾಡಿ ಪತ್ರದೊಂದಿಗೆ ಇಬ್ಬರಿಗೆ ತಲಾ 50,00 ರೂ. ಕಳುಹಿಸಿಕೊಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಅವರ ಮನವಿಗೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ ಕುಮಾರ್, ಅಬ್ದುಲ್ ಮಜೀದ್ ಹಾಗೂ ಶೇಖರ್ ಕುಲಾಲ್ ರಿಗೆ ಡಿಸಿಪಿ ಹನುಮಂತರಾಯ ಹಾಗೂ ಪತ್ರಕರ್ತರ ಸಮ್ಮಖದಲ್ಲಿ 50,000 ಸಾವಿರ ಚೆಕ್ ನ್ನು ಇಂದು ಹಸ್ತಾಂತರಿಸಿದರು.

