ಕೈಕಂಬ:ಯಕ್ಷಮಿತ್ರರು ಸುಂಕದಕಟ್ಟೆ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಸುಂಕದಕಟ್ಟೆಯಲ್ಲಿ ನವರಾತ್ರಿ ಸಂದರ್ಭ ಕಳೆದ ಹತ್ತು ವರುಷಗಳಿಂದ ನಿರಂತರವಾಗಿ ಯಕ್ಷಗಾನದ ಹತ್ತು ಹಲವಾರು ವೈವಿಧ್ಯತೆಗಳನ್ನು ಸಾದರಪಡಿಸುತ್ತಾ, ಕ್ಷೇತ್ರದಲ್ಲಿ ಶ್ರೀ ದೇವಿಗೆ ಕಲಾರಾಧನೆಯನ್ನು ಭಕ್ತಿಯಿಂದ ಅರ್ಪಿಸಿಕೊಂಡು ಬಂದು ಈ ವರುಷ ದಶಮ ಸಂಭ್ರಮವನ್ನು ವೈಶಿಷ್ಟ್ಯಪೂರ್ಣವಾಗಿ ನಡೆಸಲಾಯಿತು.
ಯಕ್ಷಲೋಕದ ದಿಗ್ಗಜರಿಂದ ಅಪರಾಹ್ನ ಸತ್ಯಹರಿಶ್ಚಂದ್ರ, ಯಕ್ಷಗಾನ ತಾಳಮದ್ದಳೆಯನ್ನು ವ್ಯವಸ್ಥೆಗೊಳಿಸಲಾಗಿತ್ತು.
ಇದರ ಪೂರ್ವದಲ್ಲಿ ‘ದಶಮ ಸಂಭ್ರಮ’ ವನ್ನು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ನಾರಾಯಣ. ಎನ್. ಪೂಜಾರಿ ಇವರ ಮುಂದಾಳತ್ವದಲ್ಲಿ ದೇವಳದ ಪ್ರಧಾನ ಅರ್ಚಕರಾದ ಗೋವಿಂದ ಭಟ್ ಇವರ ಉಪಸ್ಥಿತಿಯಲ್ಲಿ, ಶ್ರೀಧರ್ ಕುಂದರ್, ಗೋಪಾಲ್ ಸುವರ್ಣ. ಕಲಾವಿದ ಎಂ. ಕೆ. ರಮೇಶ್ ಆಚಾರ್ಯ ತೀರ್ಥಹಳ್ಳಿ , ದೇವಳದ ಮೆನೇಜರ್ ಶ್ರೀ ರಮೇಶ್ ಇರುವೈಲು ಇವರುಗಳ ಹಾಜರಿಯಲ್ಲಿ ದೀಪ ಪ್ರಜ್ವಲನದ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ಯಕ್ಷಮಿತ್ರ ರುವಾರಿ ಜಗದೀಶ್ ಅಮೀನ್ ಸುಂಕದಕಟ್ಟೆ ಇವರು ಜೊತೆಗಿದ್ದರು. ಈ ಸಂದರ್ಭದಲ್ಲಿ ಯಕ್ಷಮಿತ್ರರ ಅನನ್ಯ ಕಲಾ ಕೊಡುಗೆಯನ್ನು ಪ್ರಾಸ್ತಾವಿಕ ಮಾತುಗಳ ಮೂಲಕ ಎಂ. ಕೆ ರಮೇಶ್ ಆಚಾರ್ಯ ಇವರು ಸಭೆಯ ಮುಂದಿರಿಸಿದರು.

ಸಂಜೆ ಜರುಗಿದ ಯಕ್ಷಕಲಾರಾಧನೆಯಲ್ಲಿ ಪೂರ್ಣಿಮಾ ಯತೀಶ್ ರೈ ನಿರ್ದೇಶನದಲ್ಲಿ ‘ಯಕ್ಷ-ದೃಶ್ಯ-ಕಾವ್ಯ’ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು. ಯಕ್ಷ ಪರಂಪರೆಯ ಪಾತ್ರ ವೈಶಿಷ್ಟ್ಯತೆಗಳು ಪ್ರಧಾನವಾಗಿ ಮೂಡಿ ಬಂದುವು. ಇದೇ ಸಂದರ್ಭದಲ್ಲಿ ಸಭಾಕಾರ್ಯಕ್ರಮವನ್ನು ಆಯೋಜಿಸಲಾಯಿತು. ವೇದಿಕೆಯಲ್ಲಿ ಅಭ್ಯಾಗತರಾಗಿ ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ ಇಲ್ಲಿನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾರಾಣಿ, ಪದವಿ ಕಾಲೇಜಿನ ಪ್ರಾಚಾರ್ಯರಾದ ಲತಾ. ಕೆ, ಉದ್ಯಮಿ ಕೃಷ್ಣ ಕಲ್ಲೋಡಿ ಬಜ್ಪೆ, ಸಮಾಜ ಸೇವಕ ಸುಕೇಶ್ ಮಾಣಾೈ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೇವಳದ ಆಡಳಿತ ಮೊಕ್ತೇಸರ ಶ್ರೀ ನಾರಾಯಣ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಯಕ್ಷ ಮಿತ್ರರ ಈ ಸೇವೆಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದ ಶ್ರೀ ಸುಕೇಶ್ ಮಾಣಾೈ, ವಿನೋಧರ್ ಪೂಜಾರಿ, ಲಕ್ಷ್ಮೀಕಾಂತ್ ಇವರುಗಳನ್ನು ಗೌರವಿಸಲಾಯಿತು.
ದಶಮ ಸಂಭ್ರಮವನ್ನು ಅರ್ಥಪೂರ್ಣಗೊಳಿಸುವಲ್ಲಿ ಹತ್ತು ಮಂದಿ ಕಲಾ ಪ್ರೋತ್ಸಾಹಕರು, ಸಾಧಕರು, ಕಲಾವಿದರುಗಳಾದ ಭುವನಾಭಿರಾಮ ಉಡುಪ, ಮಾಧವ ಬಂಗೇರ ಕೊಳತ್ತಮಜಲು, ಶೋಭಾರಾಣಿ ಶೆಟ್ಟಿ, ಪೂರ್ಣಿಮಾ ಯತೀಶ್ ರೈ, ಭವ್ಯಶ್ರೀ ಕಲ್ಕುಂದ, ಅಮೃತಾ ಅಡಿಗ, ಸುಮಂಗಲಾ ರತ್ನಾಕರ್, ಕುಮಾರಿ ಪ್ರತಿಮಾ ಆಚಾರ್ಯ, ಮಧುರಾಜ್ ಗುರುಪುರ, ವಿಶ್ವನಾಥ ಪೂಜಾರಿ ರೆಂಜಾಳ ಇವರುಗಳನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಭುವನಾಭಿರಾಮ ಉಡುಪ ಮತ್ತು ಸುಕೇಶ್ ಮಾಣಾೈ ಈ ಸಂದರ್ಭದಲ್ಲಿ ಕೃತಜ್ಞತಾಪೂರ್ವಕವಾಗಿ ಮಾತನಾಡಿ ಯಕ್ಷಮಿತ್ರರ ಸೇವೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ದೇವಳದ ವತಿಯಿಂದ ದಶಮ ಸಂಭ್ರಮದ ರುವಾರಿ ಯಕ್ಷ ಮಿತ್ರರು ಸುಂಕದಕಟ್ಟೆ ಇದರ ಮುಂದಾಳು ಜಗದೀಶ್ ಅಮೀನ್ ಸುಂಕದಕಟ್ಟೆ ಇವರನ್ನು ದೇವಳದ ಆಡಳಿತ ಮೊಕ್ತೇಸರರಾಧಿಯಾಗಿ ಉಪಸ್ಥಿತರಿದ್ದು ಆತ್ಮೀಯವಾಗಿ ಅಭಿನಂದಿಸಲಾಯಿತು.
ಒಟ್ಟು ಕಾರ್ಯಕ್ರಮವನ್ನು ಕಾಲೇಜಿನ ಗ್ರಂಥಪಾಲಕರಾದ ವಿಶ್ವನಾಥ ಪೂಜಾರಿ ರೆಂಜಾಳ ಇವರು ನಿರೂಪಿಸಿದರು.








