ಬಂಟ್ವಾಳ: ನಮಗೆ ನೋಟೀಸ್ ನೀಡಿ ಒಕ್ಕಲೆಬ್ಬಿಸುವ ಬದಲು ನಮಗೆ ನ್ಯಾಯ ಕೊಡಿ, ಮನೆ ನೀಡದಿದ್ದರೂ ಪರವಾಗಿಲ್ಲ ನಮ್ಮನ್ನು ಮನೆ ಬಿಟ್ಟು ತೊಲಗಿ ಎಂದು ಮಾತ್ರ ಹೇಳಬೇಡಿ, ಗ್ರಾ.ಪಂ.ನ ಅಧಿಕಾರಿಗಳ ಬೊಕ್ಕಸ ತುಂಬಲು ಮಾಡಿದ ಕೆಲಸಕ್ಕೆ ನಮ್ಮನ್ನು ಬಲಿಕೊಡುವ ಬದಲು ಅವರಿಗೆ ಶಿಕ್ಷೆ ನೀಡಿ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಅಂಗಲಾಚುವ ದೃಶ್ಯ ಕಂಡು ಬಂದದ್ದು ಪುದು ಗ್ರಾ.ಪಂ.ನ ಪರಂಗಿಪೇಟೆಯಲ್ಲಿ . ಹೌದು ಇದು ಕಳೆದ ವರ್ಷ ಗುಡ್ಡ ಜರಿದು ಕುಸಿತದ ಬೀತಿಯಲ್ಲಿದ್ದ ಮನೆಯವರ ಗೋಳು. ಕೇಳುವವರಿಲ್ಲದೆ ನರಕ ಯಾತನೆಯನ್ನು ಅನುಭವಿಸುವವರ ಮಾತು.

ತಾಲೂಕಿನ ಪುದು ಗ್ರಾಮದ ಫರಂಗಿಪೇಟೆಯಲ್ಲಿ ಕಳೆದ ವರ್ಷ ಗುಡ್ಡ ಕುಸಿದು ಅಪಾಯಕ್ಕೆ ಸಿಲುಕಿಗೊಂಡ ಮೂರು ಮನೆಗಳು ಮತ್ತೆ ಅಪಾಯದ ಕ್ಷಣಗಳನ್ನು ಎಣಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಗುಡ್ಡದ ಮಣ್ಣು ಮೆದುಗೊಂಡು ಸ್ವಲ್ಪ ಸ್ವಲ್ಪವೇ ಕುಸಿಯಲಾರಂಭಿಸಿದೆ. ಇದೇ ರೀತಿ ಮುಂದುವರಿದರೆ ಮನೆಗಳು ಧರಶಾಹಿಯಾಗುವ ಲಕ್ಷಣಗಳು ಗೋಚರಿಸಲಾರಂಭಿಸಿದೆ.
ಫರಂಗಿಪೇಟೆಯಲ್ಲಿರುವ ಪುದು ಗ್ರಾಮಪಂಚಾಯಿತಿನ ಹಿಂಭಾಗದದಲ್ಲಿ ಕಳೆದ ವರ್ಷ ಜುಲೈ 14ರಂದು ಖಾಸಗಿ ಕಟ್ಟಡವೊಂದರ ನಿರ್ಮಾಣದ ವೇಳೆ ಭೂ ಕುಸಿತ ಉಂಟಾಗಿ ಮೂರು ಮಂದಿ ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತ ಪಟ್ಟಿದ್ದರು. ಇದು ಒಂದು ರೀತಿಯ ಆಘಾತವಾದರೆ, ಗುಡ್ಡ ಕುಸಿತದಿಂದಾಗಿ ಅದರ ಮೇಲ್ಭಾಗದಲ್ಲಿದ್ದ ಮನೆಗಳು ಕುಸಿಯುವ ಭೀತಿ ಎದುರಿಸುತ್ತಿದ್ದುದು ಇನ್ನೊಂದು ಆತಂಕಕ್ಕೆ ಕಾರಣವಾಗಿತ್ತು. ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಭೂ ಕುಸಿತವೂ ಹೆಚ್ಚಾಗಿ ಈ ಮನೆಯಲ್ಲಿ ವಾಸ ಮಾಡುತ್ತಿದ್ದ ಜನರು ಪ್ರಾಣಾ ಭೀತಿಯಲ್ಲಿ ಬದುಕುವಂತಾಯಿತು.
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಸಹಿತ ಜಿಲ್ಲಾಡಳಿತದ ಅಧಿಕಾರಿಗಳು ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದರು. ಇಂದಲ್ಲ, ನಾಳೆ ಪರ್ಯಾಯ ವ್ಯವಸ್ಥೆಯ ಸಿಗುತ್ತದೆ ಎಂದು ಇಷ್ಟರವರೆಗೆ ದಿನಕಳೆಯ ಬೇಕಾಯಿತೇ ವಿನಃ ಯಾವುದೇ ಪರ್ಯಾಯ ವ್ಯವಸ್ಥೆ ದೊರಕಿಲ್ಲ. ಮಣ್ಣು ಕುಸಿದ ಜಾಗಕ್ಕೆ ಟರ್ಪಾಲು ಹಾಕಿ ಹೋದ ಜಿಲ್ಲಾಡಳಿತ ಮತ್ತೆ ಇತ್ತ ತಿರುಗಿಲ್ಲ ಎನ್ನುವುದು ಇಲ್ಲಿನ ನಿವಾಸಿಗಳ ಅಳಲು.
ಮತ್ತೆ ಭೂ ಕುಸಿತದ ಭೀತಿ:
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಮತ್ತೆ ಭೂ ಕುಸಿತ ಭೀತಿ ಎದುರಾಗಿದೆ. ಇಲ್ಲಿನ ಅಬುಸಾಲಿ, ಜುಲೈಕಾ, ಸಿದ್ದೀಕ್ ಎಂಬವರ ಮನೆಗಳು ತೀವ್ರ ಅಪಾಯದಲ್ಲಿದೆ. ಗುಡ್ಡ ಮಣ್ಣು ನಿಧಾನಕ್ಕೆ ಕುಸಿಯರಾಂಭಿಸಿದ್ದು ಅಪಾಯದ ಮುನ್ಸೂಚನೆ ನೀಡಿದೆ. ಇದರಿಂದಾಗಿ ಮನೆಮಂದಿಯಲ್ಲಿ ಆತಂಕ ಎದುರಾಗಿದೆ. ಈ ಮನೆಗಳಿಗಿದ್ದ ಸಂಪರ್ಕ ರಸ್ತೆಯೂ ಭೂ ಕುಸಿತದ ವೇಳೆ ಧರಶಾಹಿಯಾಗಿರುವುದರಿಂದ ಇವರೆಲ್ಲಾ ಪೇಟೆಗೆ ಬರಲು ಮಣ್ಣು ಕುಸಿದು ಬಿದ್ದಿರುವ ಜಾಗದಿಂದಲೇ ಹಾದು ಬರಬೇಕಾಗಿದೆ. ಮಳೆಗೆ ಮಣ್ಣು ಮೆದುಗೊಂಡಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ತೀರಾ ಬಡತನದಲ್ಲಿರುವ ಈ ಮನೆಯ ನಿವಾಸಿಗಳು ಸಣ್ಣ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದು ಪರ್ಯಾಯ ವ್ಯವಸ್ಥೆ ದೊರಕದೆ ಸಂಕಷ್ಟದ ಜೀವನ ನಡೆಸುತ್ತಿದ್ದರೆ. ಕಳೆದ ಮಳೆಗಾಲವನ್ನು ಭಯದಿಂದಲೇ ಕಳೆದ ಇಲ್ಲಿನ ನಿವಾಸಿಗಳು ಈ ಮಳೆಗಾಲದಲ್ಲೂ ಪ್ರಾಣ ಭೀತಿಯಲ್ಲಿಯೇ ಬದುಕುವಂತಾಗಿದೆ.
