ಮಂಗಳೂರು, ಜೂ.10: ಮಂಗಳೂರು ಹೊರವಲಯದ ವಳಚ್ಚಿಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಕಂಟೈನರ್ ಲಾರಿಯೊಂದು ರಿಕ್ಷಾ ಮತ್ತು ಮಾರುತಿ 800 ಕಾರಿಗೆ ಢಿಕ್ಕಿ ಹೊಡೆದಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿಯು ವಳಚ್ಚಿಲ್ ಸಮೀಪದ ಯಶಸ್ವಿ ಹಾಲ್ ಬಳಿ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ನ ಮೇಲೇರಿ ವಿರುದ್ಧ ಬದಿಯ ರಸ್ತೆಯ ಮೂಲಕ ಆಗಮಿಸುತ್ತಿದ್ದ ಮಾರುತಿ 800 ಮತ್ತು ಆಟೊರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಕಂಟೈನರ್‌ನಡಿಗೆ ಸಿಲುಕಿ ನಜ್ಜುಗುಜ್ಜಾಗಿದೆ.
ರಿಕ್ಷಾದಲ್ಲಿ ಬಂಟ್ವಾಳ ಸಮೀಪದ ನಂದಾವರದ 6 ಮಂದಿ ಪ್ರಯಾಣಿಸುತ್ತಿದ್ದು, ಈ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಿಕ್ಷಾದಲ್ಲಿದ್ದ ಇನ್ನಿಬ್ಬರ ಸಹಿತ ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕಂಟೈನರ್ ಚಾಲಕನ ನಿರ್ಲಕ್ಷವೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶಿತ ಜನರು ಕಂಟೈನರ್ ಲಾರಿಗೆ ಬೆಂಕಿ ಹಚ್ಚಲೂ ಮುಂದಾಗಿದ್ದು, ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ತಿಳಿದುಬಂದಿದೆ.






