ಬಜ್ಪೆ: ದೇಶದ ಎರಡನೇ ಅತ್ಯುಚ್ಚ ನಾಗರಿಕ ಗೌರವ ಪ್ರಶಸ್ತಿಯಾದ `ಪದ್ಮವಿಭೂಷಣ’ ಗೌರವವು ಧರ್ಮಸ್ಥಳದ ಧರ್ಮಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರಿಗೆ ದಕ್ಕಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಎ.8ರಂದು ಹೆಗ್ಗಡೆಯವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಹುಟ್ಟೂರಿಗೆ ಆಗಮಿಸಿದ ವೀರೇಂದ್ರ ಹೆಗ್ಗಡೆಯವರಿಗೆ ಮಂಗಳೂರಿನ ವಿಮಾನನಿಲ್ದಾಣದಲ್ಲಿ ಎ.9ರಂದು ಅಧ್ದೂರಿ ಸ್ವಾಗತ ನೀಡಲಾಯಿತು.
ಈ ವೇಳೆ ಪತ್ರಕರ್ತರನ್ನುದ್ದೇಶಿಸಿ ಮಾತಾಡಿದ ಹೆಗ್ಗಡೆಯವರು, ದೇಶದ ರಾಷ್ಟ್ರಪತಿಗಳು ಹಾಗೂ ಸರಕಾರ ನನಗೆ ಪದ್ಮವಿಭೂಷಣ ನೀಡಿ ಗೌರವಿಸಿದೆ. ಈ ಪ್ರಶಸ್ತಿ ನಿಜವಾಗಿಯೂ ಸಂದಿರುವುದು ಜನತಾ ಜನಾರ್ದನನಿಗೆ.. ಇಲ್ಲಿ ಜನಾರ್ದನ ಆಗಿರುವವರು ಧರ್ಮಸ್ಥಳದ ಮಂಜುನಾಥ ಸ್ವಾಮಿ. ನನ್ನ ಮೊದಲ ಕರ್ತವ್ಯ ಏನಾಗಿದೆ ಎಂದರೆ ಮಂಜುನಾಥ ಸ್ವಾಮಿಯ ಸೇವೆ ಮಾಡುವುದುದಾಗಿದೆ. ನಾನು ಮಂಜುನಾಥ ಸ್ವಾಮಿಯ ಆಣತಿಯಂತೆ ದುಡಿದಿದ್ದೇನೆ ಅದಕ್ಕಾಗಿ ನಾನು ಎಲ್ಲರಿಗೂ ಋಣಿಯಾಗಿದ್ದೇನೆ ಎಂದರು.


ದೇವರೊಂದಿಗೆ ಜನರ ಸೇವೆ ಮಾಡುವುದನ್ನು ಕರ್ತವ್ಯದಂತೆ ಮಾಡಿದೆ. ನನಗೆ ಮಂಜುನಾಥ ಸ್ವಾಮಿಯು ಬಡಜನರಿಗೆ `ಅನ್ನ ದಾಸೋಹ’ ನೀಡುವಂತೆ ಹೇಳಿದ್ದಾರೆ. ಅವರ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಪೂರೈಸಲು ಶ್ರಮಿಸಿದ್ದೇನೆ. ನನ್ನ ಪೂರ್ವಜರು ಹಾಕಿಕೊಟ್ಟ ಮಾರ್ಗದಂತೆ ನಡೆದುಕೊಂಡಿದ್ದು, ಅವರಿಂದಲೇ ನನಗೆ ನನಗೆ ಇಷ್ಟೆಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಯಿತು ಎಂದರು.
ನನ್ನ ಹೆಂಡತಿ ಹಾಗೂ ನನ್ನ ಕುಟುಂಬಿಕರು ನಾನು ಮಾಡುವ ಕೆಲಸಕ್ಕೆ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ. ನನಗೆ ಬೆಂಬಲ ನೀಡಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ನನಗೆ ಪ್ರಶಸ್ತಿ ಸಿಕ್ಕಿದ್ದಕ್ಕಿಂತ ನನ್ನನ್ನು ಸ್ವಾಗತಿಸಲು ಬಂದವರಲ್ಲಿ ನನಗಿಂತ ಹೆಚ್ಚು ಸಂತೋಷ ಕಾಣುತ್ತಿದೆ. ಇದಕ್ಕಿಂತ ಹೆಚ್ಚು ನನಗೇನು ಬೇಕು? ಜನರ ಪ್ರೀತಿ, ವಾತಸ್ಲ್ಯದಿಂದ ಇಷ್ಟೆಲ್ಲಾ ಕಾರ್ಯ ಮಾಡಲು ಸಾಧ್ಯವಾಯಿತು ಎಂದು ವಿರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ವಿರೇಂದ್ರ ಹೆಗ್ಗಡೆಯವರ ಪತ್ನಿ ಹೇಮಾವತಿ ಹೆಗ್ಗಡೆಯವರು ಕೂಡಾ ಈ ಸಂದರ್ಭದಲ್ಲಿ ಮಾತಾಡಿ, ಗ್ರಾಮೀಣಾಭಿವೃದ್ಧಿ ಹಾಗೂ ಇತರ ಸೇವಾ ಯೋಜನೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ವಿರೇಂದ್ರ ಹೆಗ್ಗಡೆಯವರನ್ನು ಸ್ವಾಗತಿಸಲು ಬೆಳ್ತಂಗಡಿ ಶಾಸಕ ವಸಂತ ಬಂಗೇರಾ, ಬಜ್ಪೆ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ, ಸುರೇಂದ್ರ ಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

